ಜೂ. 5ರಂದು ಬಾಳುಗೋಡಿನಲ್ಲಿ ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್

ಹೊಸದಿಗಂತ ವರದಿ ಮಡಿಕೇರಿ:

ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಆಯೋಜಿಸಲುದ್ದೇಶಿಸಿ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ ‘ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್-2022’ನ್ನು ಜೂ. 5ರಂದು ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಪುನರ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಪಿ. ದಿನೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆಸಿಐನ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ದಾನಿಗಳ ನೆರವಿನೊಂದಿಗೆ ಮೊದಲ ಬಾರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.

ಉದ್ದೇಶಿತ ನಿಸರ್ಗ ಜೆಸಿಐ ಶೂಟಿಂಗ್ ಫೆಸ್ಟ್’ನಲ್ಲಿ ಸ್ಪರ್ಧೆಗಳನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 0.22 ರೈಫಲ್ ಶೂಟಿಂಗ್, 12ನೇ ಬೋರ್’ನ ಗನ್ ಶೂಟಿಂಗ್ ಹಾಗೂ ಏರ್ ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಲ್ಲಾ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಆಕರ್ಷಕ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಅವರು ವಿವರಿಸಿದರು.

0.22 ರೈಫಲ್ ಶೂಟಿಂಗ್ ನಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ. 25 ಸಾವಿರ, 20ಸಾವಿರ,15ಸಾವಿರ, 12ನೇ ಬೋರಿನ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ.20 ಸಾವಿರ, 15ಸಾವಿರ,10 ಸಾವಿರ ಹಾಗೂ ಏರ್ ಗನ್ ಮೂಲಕ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಕ್ರಮವಾಗಿ ರೂ. 5 ಸಾವಿರ, 4ಸಾವಿರ, 3ಸಾವಿರ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದರು.

ಸ್ಪರ್ಧೆಯ ಎಲ್ಲಾ ಮೂರು ವಿಭಾಗಗಳಲ್ಲಿ ಪಾಲ್ಗೊಂಡು ಅತಿಹೆಚ್ಚು ಸುತ್ತುಗಳಿಗೆ ಪ್ರವೇಶ ಪಡೆದು ಗಮನ ಸೆಳೆಯುವ ಅತಿ ಕಿರಿಯ ವಯಸ್ಸಿನ ಶೂಟರ್ಸ್’ಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದ ದಿನೇಶ್ ಅವರು , ಕಾರ್ಯಕ್ರಮದಂದು ಬೆಳಗ್ಗೆ 9 ಗಂಟೆಯಿಂದ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ 9148978919, 9972538030 ಅಥವಾ 9449255081ಅನ್ನು ಸಂಪರ್ಕಿಸಬಹುದಾಗಿದೆ ಎಂದರು
ಗೋಷ್ಠಿಯಲ್ಲಿ ಸ್ಪರ್ಧೆಯ ಯೋಜನಾ ನಿರ್ದೇಶಕ ಎ. ಎಸ್. ಟಾಟು ಮೊಣ್ಣಪ್ಪ, ಸಂಸ್ಥೆಯ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!