ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ಹತನಾಗಿದ್ದಾನೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಋಷಿಪೋರಾ ಗ್ರಾಮದ ಕಪ್ರಾನ್ ಪ್ರದೇಶದಲ್ಲಿ ಉಗ್ರರು ಇದ್ದಾರೆ ಎಂಬ ಮಾಹಿತಿ ಮೇರೆಗೆ ಸೇನೆ ಮತ್ತು ಸ್ಥಳೀಯ ಪೊಲೀಸರು ಶುಕ್ರವಾರ ಸಂಜೆ ಕಾರ್ಡನ್ ಮತ್ತು ಸರ್ಚ್ ಆಪರೇಷನ್ ಶುರು ಮಾಡಿದ್ದರು.
ನಿನ್ನೆ ಮಧ್ಯರಾತ್ರಿ ಶಂಕಿತ ಉಗ್ರರು ತಂಗಿದ್ದ ಮನೆಯನ್ನು ಸುತ್ತುವರಿದ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಹಿಜ್ಬುಲ್-ಉಲ್-ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ನಿಸಾರ್ ಖಂಡೆ ಹತನಾಗಿದ್ದಾನೆ.
ಸ್ಥಳದಲ್ಲಿದ್ದ ಎಕೆ-4 ರೈಫಲ್ ಸೇರಿದಂತೆ ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯಕುಮಾರ್ ಟ್ವೀಟ್ ಮಾಡಿದ್ದಾರೆ. ಕಾರ್ಯಾಚರಣೆ ಮುಂದುವರಿದಿದ್ದು, ಪೂರ್ಣಗೊಂಡ ಬಳಿಕ ಸಾವಿನ ಸಂಖ್ಯೆ ಪ್ರಕಟಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.