ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರವು ಅತ್ಯಲ್ಪವಾಗಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳ ಕೊಡುಗೆಯೇ ಹೆಚ್ಚಿದೆ. ಇದಕ್ಕಾಗಿ ಭಾರತವನ್ನು ದೂಷಿಸುವುದು ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸದ್ಗುರು ಜಗ್ಗೀ ವಾಸುದೇವ್ ಅವರ ʼಮಣ್ಣು ಉಳಿಸಿʼ ಆಂದೋಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ಭಾರತವು ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಸ್ವಚ್ಛ ಭಾರತ್ ಮಿಷನ್, ನಮಾಮಿ ಗಂಗೆ, ಅಥವಾ ಒಂದು ಸೂರ್ಯ, ಒಂದು ಗ್ರಿಡ್ ಮುಂತಾದ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಗೆ ಬಹುಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅತಿ ಹೆಚ್ಚು ಇಂಗಾಲ ಹೊರಸೂಸುವಿಕೆಗೆ ಕಾರಣವಾಗಿವೆ” ಎಂದು ಹೇಳಿದ್ದಾರೆ.
ಅಲ್ಲದೇ ಸದ್ಗುರು ಪ್ರಾರಂಭಿಸಿರುವ ಮಣ್ಣು ಉಳಿಸಿ ಕಾರ್ಯಕ್ರಮವು ಹದಗೆಡುತ್ತಿರುವ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ಸುಧಾರಿಸಲು ಜಾಗತಿಕ ಉಪಕ್ರಮವಾಗಿದೆ ಎಂದು ಶ್ಲಾಘಿಸಿದ್ದಾರೆ. ಮಣ್ಣಿನ ಆರೋಗ್ಯದ ಬಗ್ಗೆ ಭಾರತೀಯ ರೈತರಲ್ಲಿ ಅರಿವಿನ ಕೊರತೆಯಿರುವುದನ್ನು ಗಮನಿಸಿ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಮತ್ತು ಸಮಸ್ಯೆಯನ್ನು ನಿವಾರಿಸಲು ದೊಡ್ಡ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಗಂಗಾ ನದಿ ಕಾರಿಡಾರ್‌ನಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದಾಗಿ ಘೋಷಿಸಿದ್ದೇವೆ. ಇದು ಜಮೀನುಗಳನ್ನು ರಾಸಾಯನಿಕ ಮುಕ್ತಮಾಡಿ ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.