ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ವಿದ್ಯಾರ್ಥಿನಿಯರ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಮತ್ತೊಬ್ಬ ಮಹಿಳೆ ಸಾವನ್ನಪ್ಪಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಮೆಕ್ಸಿಕೋದ ಗುವಾನಾಜಾಟೊ ಪ್ರದೇಶದಲ್ಲಿ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಗಳೆಲ್ಲರೂ 16-18 ವರ್ಷದೊಳಗಿನವರು. ಇನ್ನೊಬ್ಬ ಮಹಿಳೆಗೆ 65 ವರ್ಷ. ವಿದ್ಯಾರ್ಥಿಗಳಲ್ಲಿ ಮೂವರು ಹುಡುಗರು ಮತ್ತು ಇಬ್ಬರು ಹುಡುಗಿಯರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಮೆಕ್ಸಿಕೋದಲ್ಲಿ ಗ್ಯಾಂಗ್ ವಾರ್ ಸರ್ವೆಸಾಮಾಣ್ಯವಾಗಿದೆ. ಅದರಲ್ಲೂ ಗ್ವಾನಾಜಾಟೊ ರಾಜ್ಯದಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಗ್ಯಾಂಗ್‌ಗಳ ನಡುವೆ ಪ್ರಾಬಲ್ಯಕ್ಕಾಗಿ ಆಗಾಗ್ಗೆ ಗುಂಡಿನ ದಾಳಿಗಳು ನಡೆಯುತ್ತಿವೆ. ಎರಡು ವಾರಗಳ ಹಿಂದೆ ಗ್ಯಾಂಗ್ ವಾರ್ ಕೂಡ ನಡೆದಿತ್ತು. ಎರಡು ಗ್ಯಾಂಗ್‌ಗಳ ಸದಸ್ಯರು ಪರಸ್ಪರ ಗುಂಡು ಹಾರಿಸಿದ್ದರಿಂದ 11 ಜನರು ಸಾವನ್ನಪ್ಪಿದ್ದರು. ಪೊಲೀಸರು ಮತ್ತು ಕಳ್ಳಸಾಗಾಣಿಕೆದಾರರ ವಿರುದ್ಧವೂ ನಿರಂತರ ಗುಂಡಿನ ದಾಳಿ ನಡೆಯುತ್ತಿದೆ. 2006 ರಿಂದ ಸರ್ಕಾರ ನಡೆಸಿದ ವಿಶೇಷ ಕಾರ್ಯಾಚರಣೆಗಳಲ್ಲಿ ಸುಮಾರು 3,60,000 ಕೊಲೆಗಡುಕರು ಕೊಲ್ಲಲ್ಪಟ್ಟಿದ್ದಾರೆ.