ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಅತ್ಯಂತ ಕಡಿಮೆ ಅವಧಿಯಲ್ಲಿ ಗರಿಷ್ಠ ದೂರದ ರಸ್ತೆ ನಿರ್ಮಾಣ ಮಾಡುವ ಮೂಲಕ ಗಿನ್ನೆಸ್ ದಾಖಲೆ ಬರೆದಿದೆ.
ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ನಡುವೆ ಸಂಪರ್ಕ ಬೆಸೆಯುವ ರಾಷ್ಟ್ರೀಯ ಹೆದ್ದಾರಿ 53ರ 75 ಕಿಲೋಮೀಟರ್ ಡಾಬರೀಕರಣ ಕಾಮಗಾರಿಯನ್ನು ಸತತ 105 ಗಂಟೆ 33 ನಿಮಿಷಗಳಲ್ಲಿ (ಐದು ದಿನ) ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಈ ಮಾಹಿತಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಹೆದ್ದಾರಿಯ ಚಿತ್ರ ಮತ್ತು ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.
#ConnectingIndia with Prosperity!
Celebrating the rich legacy of our nation with #AzadiKaAmrutMahotsav, under the leadership of Prime Minister Shri @narendramodi Ji @NHAI_Official successfully completed a Guinness World Record (@GWR)… pic.twitter.com/DFGGzfp7Pk
— Nitin Gadkari (@nitin_gadkari) June 7, 2022
ಈ ರಸ್ತೆಯನ್ನು ಖಾಸಗಿ ಗುತ್ತಿಗೆದಾರ ರಜಪೂತ್ ಇನ್ಫ್ರಾಕಾನ್ ಅವರು ನಿರ್ಮಿಸಿದರು. ವರದಿಗಳ ಪ್ರಕಾರ, ಸುಮಾರು 800 ಉದ್ಯೋಗಿಗಳು ಮತ್ತು 700 ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಹಿಂದೆಯೂ ರಜಪೂತ್ ಅವರು ಸಾಂಗ್ಲಿ ಮತ್ತು ಸತಾರಾ ನಡುವೆ 24 ಗಂಟೆಗಳಲ್ಲಿ ರಸ್ತೆ ನಿರ್ಮಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.
ಅಮರಾವತಿ-ಅಕೋಲಾ ಹೆದ್ದಾರಿಯ ಕಾಮಗಾರಿ ಶನಿವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಮಂಗಳವಾರ ಸಂಪೂರ್ಣಗೊಂಡಿದೆ. ಈ ಹೆದ್ದಾರಿಯು ಕೋಲ್ಕತ್ತಾ, ರಾಯ್ಪುರ್, ನಾಗ್ಪುರ, ಅಕೋಲಾ, ಧುಲೆ ಮತ್ತು ಸೂರತ್ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.
ಈ ಮುನ್ನ 2019 ರಂದು ಕತಾರ್ನ ಸಾರ್ವಜನಿಕ ಕಾರ್ಯಗಳ ಪ್ರಾಧಿಕಾರ ಅತ್ಯಂತ ವೇಗವಾಗಿ ರಸ್ತೆ ನಿರ್ಮಿಸಿದ ದಾಖಲೆಯನ್ನು ಹೊಂದಿತ್ತು. ಅಲ್-ಖೋರ್ ಎಕ್ಸ್ಪ್ರೆಸ್ವೇನ ಭಾಗವಾಗಿದ್ದ ರಸ್ತೆಯನ್ನು ಪೂರ್ಣಗೊಳಿಸಲು 10 ದಿನಗಳನ್ನು ತೆಗೆದುಕೊಂಡಿತ್ತು.