ಟೀಂ ಇಂಡಿಯಾಕ್ಕೆ ಆಡುವ ಮುನ್ನವೇ ಕ್ರಿಕೆಟ್‌ ಇತಿಹಾಸದ ಅತ್ಯಂತ ವೇಗದ ಎಸೆತ ಎಸೆದ ಉಮ್ರಾನ್‌ ಮಲಿಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಅತ್ಯದ್ಭುತ ಬೌಲಿಂಗ್​ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಜಮ್ಮು- ಕಾಶ್ಮೀರದ 22ರ ಹರೆಯದ ವೇಗಿ​ ಉಮ್ರಾನ್ ಮಲಿಕ್​​ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್‌ ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡದ ಪರ ಆಡಿರುವ ಉಮ್ರಾನ್ ಮಲಿಕ್ 22 ವಿಕೆಟ್ ಪಡೆದು ತಮ್ಮ‌ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಪ್ರತಿ ಗಂಟೆಗೆ 157 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಎರಡನೇ ಅತಿವೇಗದ ಚೆಂಡೆಸೆದ ಸಾಧನೆ ಮಾಡಿದ್ದರು. ಐಪಿಎಲ್​​ನಲ್ಲಿ ಶರವೇಗದ ಬೌಲಿಂಗ್ ಮಾಡುವ​ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
ಉಮ್ರಾನ್‌ ಮಲ್ಲಿಕ್‌ ಬೌಲಿಂಗ್ ಬಗ್ಗೆ ಕ್ರಿಕೆಟ್‌ ದಿಗ್ಗಜರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಬ್ರೆಟ್‌ ಲೀ, ನಾನು ಉಮ್ರಾನ್‌ ಮಲಿಕ್‌ಗೆ ನಾನು ದೊಡ್ಡ ಅಭಿಮಾನಿ. ಬೆಂಕಿ ಹತ್ತಿಸುವಷ್ಟು ವೇಗವನ್ನು ಯುವ ವೇಗಿ ಹೊಂದಿದ್ದಾರೆ ಎಂದು ಗುಣಗಾನ ಮಾಡಿದ್ದರು. ಭವಿಷ್ಯದಲ್ಲಿ ಶೋಯಬ್‌ ಅಕ್ತರ್‌ ಅವರ ಅತಿವೇಗದ ಬೌಲಿಂಗ್‌ ದಾಖಲೆ ಮುರಿಯುವುದು ತನ್ನ ಗುರಿ ಎಂದು ಉಮ್ರಾನ್‌ ಕೆಲದಿನಗಳ ಹಿಂದೆ ಹೇಳಿದ್ದರು. ಇದೀಗ ತಮ್ಮ ಮಾತಿನಂತೆ ಮುಂದಡಿ ಇಟ್ಟಿದ್ದಾರೆ.
ಸೌತ್‌ ಆಫ್ರಿಕಾ ವಿರುದ್ಧದ ಟಿ.20 ಸರಣಿಗೆ ನಡೆಸುತ್ತಿದ್ದ ಅಭ್ಯಾಸದ ವೇಳೆ ಉಮ್ರಾನ್ ಮಲಿಕ್ ಬರೋಬ್ಬರಿ 163.7 ಕಿ.ಮೀ ವೇಗದ ಎಸೆತ ಎಸೆದಿದ್ದಾರೆ. ಈ ಮೂಲಕ ಟೀಮ್‌ ಇಂಡಿಯಾಕ್ಕೆ ಆಡುವ ಮುನ್ನವೇ ಪಾಕಿಸ್ತಾನದ ಶೋಯಬ್‌ ಅಖ್ತರ್ ದಾಖಲೆಯನ್ನು ಮೀರಿದ್ದಾರೆ!. ಉಮ್ರಾನ್‌ ಬೆಂಕಿ ವೇಗಕ್ಕೆ ಕೋಚ್‌ ರಾಹುಲ್ ದ್ರಾವಿಡ್ ಸಹ ಪ್ರಭಾವಿತರಾದಂತೆ ಕಂಡುಬಂದರು. ಶೋಯಬ್‌ ಅಖ್ತರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 161.3 ವೇಗದಲಲ್ಲಿ ಬೌಲ್‌ ಮಾಡಿದ್ದು ಈ ವರೆಗೆ ದಾಖಲೆಯಾಗುಳಿದಿದೆ. ಉಮ್ರಾನ್‌ ಪ್ರಸ್ತುತ ಅಖ್ತರ್‌ ಗಿಂತಲೂ ಹೆಚ್ಚಿನ ವೇಗದಲ್ಲಿ ಬೌಲ್‌ ಮಾಡಿದ್ದಾರೆ. ಆದರೆ ಅಭ್ಯಾಸ ಪಂದ್ಯದ ವೇಳೆ ಎಸೆದಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಗಣನೆಗೆ ಬರುವುದಿಲ್ಲ. ಆದರೆ ಉಮ್ರಾನ್‌ ಮಲ್ಲಿಕ್‌ ಭಾರತದ ಪರವಾಗಿ ಶೀಘ್ರವಾಗಿ ಕಣಕ್ಕಿಳಿಯಲಿದ್ದು, ಮುಂದಿನ ದಿನಗಳಲ್ಲಿ ಅಖ್ತರ್‌ ದಾಖಲೆಯನ್ನು ಮುರಿಯುವ ನಿರೀಕ್ಷೆ ಹುಟ್ಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here