1812ರಲ್ಲಿ ರಾಮನ್ ನಂಬಿ ಮರಣ ಹೊಂದಿರದಿದ್ದರೆ ಭಾರತದ ಇತಿಹಾಸವೇ ಬದಲಾಗುತ್ತಿತ್ತು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ರಾಮನ್ ನಂಬಿ ಕೇರಳದ ಕುರುಮ ಬುಡಕಟ್ಟು ಸಮುದಾಯದ ಮುಖ್ಯಸ್ಥ. ವಯನಾಡು ಪ್ರದೇಶದಲ್ಲಿ ವಸಾಹತುಶಾಹಿ ಆಡಳಿತ ವಿರೋಧಿಸಿ 1812 ರ ಬುಡಕಟ್ಟು ಜನರು ನಡೆಸಿದ ದಂಗೆಯ ಮುಂಚೂಣಿ ನಾಯಕರಲ್ಲೊಬ್ಬರಾಗಿದ್ದರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಕುರಿಚಿಯ ಮತ್ತು ಕುರುಮ ಬುಡಕಟ್ಟು ಜನರು ಈ ದಂಗೆ ನಡೆಸಿದರು. ರಾಮನ್ ದಕ್ಷಿಣ ವಯನಾಡಿನಲ್ಲಿ ದಂಗೆ ನಡೆಸಿದ ಕುರುಮ ಸೈನ್ಯದ ಮುಖ್ಯಸ್ಥರಾಗಿದ್ದರು.
‘ನಂಬಿ’ ಎಂಬುದು ವಯನಾಡಿನ ಕುರುಮ ಬುಡಕಟ್ಟು ಸಮುದಾಯದ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದ ಸಾಂಪ್ರದಾಯಿಕ ಹೆಸರು. ರಾಮನ್ ನಂಬಿ ಕೋಲ್ಪಯಟ್ಟು ಎಂಬ ಸಾಂಪ್ರದಾಯಿಕ ಸಮರ ಕಲೆಯಲ್ಲಿ ಪ್ರವೀಣರಾಗಿದ್ದರು. ಅವರು ಕುರುಮರನ್ನು ಸಂಘಟಿಸಿ ಯುದ್ಧ ತರಬೇತಿ ನೀಡಿದರು. ಬಿಲ್ಲು, ಬಾಣ, ಈಟಿಗಳು ಮತ್ತಿತರೆ ಸಾಂಪ್ರದಾಯಿಕ ಆಯುಧಗಳೊಂದಿಗೆ ಕುರುಮ ಸೈನ್ಯದ ಬೆಟಾಲಿಯನ್ ಅನ್ನು ರಚಿಸಿದರು.
ಸಮುದಾಯವು ಹೋರಾಟಕ್ಕಿಳಿದ ಬಳಿಕ ಬ್ರಿಟಿಷರ ಪ್ರತೀಕಾರದ ಮನೋಭಾವ ಕುರುಮರ ಜೀವನವನ್ನು ಅತ್ಯಂತ ಶೋಚನೀಯಗೊಳಿಸಿತು. ಭಾರೀ ತೆರಿಗೆ ವಿಧಿಸುವುದು, ಬುಡಕಟ್ಟು ಜನರನ್ನು ಅವರ ವಾಸಸ್ಥಳಗಳಿಂದ ಹೊರಹಾಕುವುದು, ದಬ್ಬಾಳಿಕೆ, ಅವಮಾನ, ಹೀಗೆ ಬ್ರಿಟಿಷರು ಕುರುಮರ ಮೇಲೆ ಸಾಲು ಸಾಲು ಅನಾಚಾರ ಎಸಗಿದರು. ಮಾರ್ಚ್ 1812 ರಲ್ಲಿ, ರಾಮನ್ ನಂಬಿ ನೇತೃತ್ವದಲ್ಲಿ ಬಂಡುಕೋರರು ದಕ್ಷಿಣ ವಯನಾಡಿನ ಕುರಿಚಿಯಾಡ್‌ನಲ್ಲಿ ಬಹಿರಂಗ ದಂಗೆಯನ್ನು ಘೋಷಿಸಿದರು. ಈ ಬುಡಕಟ್ಟು ದಂಗೆಯ ಇತರ ಕುರುಮ ಮತ್ತು ಕುರಿಚಿಯ ನಾಯಕರೆಂದರೆ ಪಲಕ್ಕಾಡ್ ಚಂದು, ಅಯಿರವಿಟ್ಟಿಲ್ ಕೊಂಟಪ್ಪನ್, ವೆಂಕಲ್ಲೋಟ್ ಕೇಲು, ಪೂರಿಕಾವಿಟ್ಟಿಲ್ ಕನೇರಿ ಕುಂಜನ್ ಮತ್ತು ಮಾಂಬಿಲತ್ತೋಡನ್ ಯಮು. ವಟ್ಟತೊಪ್ಪಿಕ್ಕರ್ (ಯುರೋಪಿಯನ್ನರ) ಆಳ್ವಿಕೆಯನ್ನು ಕೊನೆಗೊಳಿಸಲು ದೇವರು ತಮಗೆ ಅಧಿಕಾರ ನೀಡಿದ್ದಾನೆ ಎಂದು ಅವರು ನಂಬಿದ್ದರು. ಅವರು ವಯನಾಡಿನಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡರು.
ರಾಮನ್ ನಂಬಿ ನೇತೃತ್ವದ ಬಂಡುಕೋರರು ವಯನಾಡ್‌ನಲ್ಲಿರುವ ಯುರೋಪಿಯನ್ನರ ಸೇತುವೆಗಳು ಮತ್ತು ಮಿಲಿಟರಿ ಪೋಸ್ಟ್‌ಗಳಿಂದ ಸಂಗ್ರಹಿಸಲಾದ ಕಬ್ಬಿಣದ ಸರಳುಗಳಿಂದ ಈಟಿಗಳು ಮತ್ತು ಬಾಣಗಳನ್ನು ಸಿದ್ಧಪಡಿಸಿದ್ದರು. ಬಂಡುಕೋರರು ಚೀಂಗೇರಿ, ಪಕ್ಕಂ, ಮುದ್ರಾಮೂಲ, ಗಣಪತವಟ್ಟಂ ಮತ್ತು ಮುಟ್ಟಿಯಲ್ಲಿ ಬ್ರಿಟೀಷ್‌ ಸೇನೆಗೆ ಮುಖಾಮುಖಿಯಾಯಿತು.
ಏಪ್ರಿಲ್ 27 ರಂದು ರಾಮನ್ ನಂಬಿ ನೇತೃತ್ವದಲ್ಲಿ ಬಂಡುಕೋರರ ಗುಂಪು ಕಂಪನಿಯ ಸೈನಿಕರ ಮೇಲೆ ದಾಳಿ ಮಾಡಿತು, ಆದರೆ ಬ್ರಿಟೀಷ್ ಸೈನ್ಯವು ಟೆಲ್ಲಿಚೇರಿ ಸಮೀಪದ ಕುಟ್ಟಿಯಾಡಿ ಘಾಟ್ ಬಳಿ ಬಂಡುಕೋರರನ್ನು ಹಿಮ್ಮೆಟ್ಟಿಸಿತು. ಇದೇ ರೀತಿ ಪೂತಡಿ, ಪುರಕ್ಕಾಡಿ, ಪನಮರಮ್ ಮತ್ತು ಮಾನಂತವಾಡಿಯಲ್ಲಿ ಬ್ರಿಟಿಷ್ ಸೈನ್ಯ ಮತ್ತು ರಾಮನ್ ನಂಬಿ ನೇತೃತ್ವ ಬಂಡುಕೋರರ ನಡುವೆ ಭಾರೀ ಯುದ್ಧಗಳು  ಸಂಭವಿಸಿದವು. ಬಂಡುಕೋರರ ಗೆರಿಲ್ಲಾ ಯುದ್ಧ ನೀತಿಯ ಕಾರಣದಿಂದಾಗಿ ಬ್ರಿಟಿಷ್‌ ಸೇನೆಯು ದೊಡ್ಡ ನಷ್ಟವನ್ನು ಅನುಭವಿಸಿತು.
ಆದರೆ ಬ್ರಿಟೀಷ್‌ ಸೇನೆ ಸೋಲಿನಂಚಿಗೆ ತಲುಪಿದ ಸಂದರ್ಭದಲ್ಲೇ, ದುರಾದೃಷ್ಟವಶಾತ್‌ ದಂಗೆಯ ನಾಯಕ ರಾಮನ್ ನಂಬಿ 1812 ರ ಮೇ 1 ರಂದು ಉತ್ತರ ವಯನಾಡಿನ ಕೂರ್ಗ್‌ನ ಗಡಿಯ ಬಳಿ ವೀರೋಚಿತ ಹೋರಾಟದ ಬಳಿಕ ನಿಧನರಾದರು. ಈ ಬುಡಕಟ್ಟು ನಾಯಕನ ಮರಣದ ನಂತರ, ಬ್ರಿಟಿಷರು ಅವನ ಪಾರ್ಥಿವ ಶರೀರಕ್ಕೆ ಬಹಳ ಅಗೌರವವನ್ನು ಪ್ರದರ್ಶಿಸಿದರು. ಒಬ್ಬ ಬ್ರಿಟಿಷ್ ಸೇನಾಧಿಕಾರಿ ಅವನ ತಲೆಯನ್ನು ಕತ್ತರಿಸಿ ಅವನ ತಲೆಯನ್ನು ಅವನ ಚಿಕ್ಕ ಮಗುವಿನ ಮುಂದೆ ಪ್ರದರ್ಶಿಸಿದ. ಆದರೆ ಆ ವೀರ ಹೋರಾಟಗಾರನ ಪುಟ್ಟ ಮಗ ಪರಿಪೂರ್ಣ ಮೌನದಿಂದ ಆ ಸಂದರ್ಬದಲ್ಲಿ ಮಹಾನ್ ಧೈರ್ಯಪ್ರದರ್ಶಿಸಿದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!