ಹೊಸ ದಿಗಂತ ವರದಿ , ಮೈಸೂರು:
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸುತ್ತೇವೆ ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಅಸಮಾಧಾನ, ಗೊಂದಲಗಳು ಇಲ್ಲ. ಪಕ್ಷದ ಅಭ್ಯರ್ಥಿಯಾಗಿರುವ ಮೈ.ವಿ.ರವಿಶಂಕರ್ ಗೆಲುವಿಗಾಗಿ ಎಲ್ಲಾ ಮುಖಂಡರು, ಕಾರ್ಯಕರ್ತರು ಹಗಲು, ರಾತ್ರಿ ಎನ್ನದೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
25 ಮಂದಿ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುವ ಮೂಲಕ ಅವರ ಮನವೊಲೈಸುವುದಕ್ಕಾಗಿ 1290 ಮಂದಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. 10 ಜನರಿಗೆ ಒಬ್ಬರಂತೆ ಪ್ರಮುಖರನ್ನು ನೇಮಕ ಮಾಡಿದ್ದು, ಅವರು ಕೂಡ ಮತದಾರರ ಭೇಟಿ ಕಾರ್ಯ ಮಾಡುತ್ತಿದ್ದಾರೆ. ಎಲ್ಲಾ ಮತದಾರರನ್ನು ಮುಟ್ಟುವ ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಶೇ 80ರಷ್ಟು ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದೇವೆ. ಉಳಿದ ಶೇ 20ರಷ್ಟು ಮತದಾರರನ್ನು ಚುನಾವಣಾ ಆಯೋಗದವರು ನೀಡಿರುವ ಮತದಾರರ ಪಟ್ಟಿಯಲ್ಲಿರುವ ದೋಷಗಳು, ನ್ಯೂನತೆಗಳಿಂದ ಮುಟ್ಟಲು ಸಾಧ್ಯವಾಗಿಲ್ಲ. ಮೈಸೂರು ನಗರದಲ್ಲಿ ಈಗಾಗಲೇ 40 ಸಾವಿರ ಮಂದಿ ಮತದಾರರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ್ದೇವೆ, ಉತ್ತಮ ಪ್ರತಿಕ್ರಿಯೆ ಮತದಾರರಿಂದ ವ್ಯಕ್ತವಾಗಿದೆ ಎಂದು ಹೇಳಿದರು.
ಯಾವ, ಯಾವ ಜಿಲ್ಲೆಯಲ್ಲಿ ಹೇಗೆ ಪರಿಸ್ಥಿತಿಯಿದೆ, ಮತದಾರರ ಒಲವು ಯಾರತ್ತ ಇದೆ ಎಂಬುದರ ಕುರಿತು ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಎಲ್ಲಾ ವರದಿಗಳು ಕೂಡ ಬಿಜೆಪಿಯ ಪರವಾಗಿಯೇ ಇದೆ. ಇಡೀ ಕ್ಷೇತ್ರದಲ್ಲಿ ಬಿಜೆಪಿಯ ಅಲೆ ಹೆಚ್ಚಾಗಿರುವುದು ವರದಿಯಿಂದ ಕಂಡು ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದೆ.
ಮಂಡ್ಯ ಜಿಲ್ಲೆಯಲ್ಲೂ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲಿನ ಹೊಸ ಅಧ್ಯಕ್ಷರು, ಹಾಗೂ ಸಚಿವರಾದ ನಾರಾಯಣಗೌಡರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಮಂಡ್ಯ ಜಿಲ್ಲೆಯಲ್ಲೂ ಹೆಚ್ಚಿನ ಬೆಂಬಲ ಮತದಾರರಿಂದ ವ್ಯಕ್ತವಾಗುತ್ತಿದೆ. ಅಲ್ಲೂ ಕೂಡ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ದೊರಕುವ ನಿರೀಕ್ಷೆಯಿದೆ. ಚಾಮರಾಜನಗರ, ಹಾಸನ ಜಿಲ್ಲೆಯಿಂದಲೂ ಪಕ್ಷದ ಅಭ್ಯರ್ಥಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದರಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿOದ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿದ್ದರಾಜು, ವಿಧಾನಪರಿಷತ್ ಸದಸ್ಯೆ ಹೇಮಲತಾ, ಬಿಜೆಪಿ ಮೈಸೂರು ನಗರ ವಕ್ತಾರ ಎಂ.ಎ.ಮೋಹನ್, ಮಾಧ್ಯಮ ವಕ್ತಾರ ಮಹೇಶ್ ರಾಜೇ ಅರಸ್, ನಗರಪಾಲಿಕೆಯ ಮೇಯರ್ ಸುನಂದಾಪಾಲನೇತ್ರ, ಆಡಳಿತ ಪಕ್ಷದ ನಾಯಕ ಶಿವಕುಮಾರ್, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.