ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ದೆಹಲಿಯ ಡಿಎನ್ಡಿ(ದೆಹಲಿ-ನೋಯ್ಡಾ)ಫ್ಲೈವೇಯ ಸಮೀಪದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಿಷ್ಕ್ರಿಯ ಗೊಳಿಸಿದೆ ಎಂದು ವರದಿಯಾಗಿದೆ.
ಪೂರ್ವ ದೆಹಲಿಯ ಮಯೂರ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಯಮುನಾ ಖಾದರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ನಿನ್ನೆ ಅಪರಾಹ್ನ ಯಮುನಾ ಖಾದರ್ ಪ್ರದೇಶದಲ್ಲಿ ಸ್ನಾನ ಮಾಡುತ್ತಿದ್ದ ಕೆಲವರಿಗೆ ನೀರಿನಲ್ಲಿದ್ದ ಗೋಣಿಚೀಲವೊಂದರಲ್ಲಿ ಗ್ರೆನೇಡ್ ಪತ್ತೆಯಾಗಿದೆ. ತಕ್ಷಣವೇ ಪೋಲೀಸರಿಗೆ ಮಾಹಿತಿ ತಿಳಿಸಲಾಗಿದ್ದು ಮಯೂರ್ ವಿಹಾರ್ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಆಗಮಿಸಿ ಬಿಗಿ ಭದ್ರತೆ ಕೈಗೊಂಡಿತು ಎನ್ನಲಾಗಿದೆ.
ಗ್ರೆನೇಡ್ ಪತ್ತೆಯಾಗಿರುವ ವಿಷಯವನ್ನು ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ)ಕ್ಕೆ ತಿಳಿಸಲಾಯಿತು. ಕೆಲವೇ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅವರು ಕೆಲವುಗಂಟೆಗಳ ನಂತರ ಗ್ರೆನೇಡ್ ನಿಷ್ಕ್ರಿಯ ಗೊಳಿಸಿ ಆ ಪ್ರದೇಶವನ್ನು ಸುರಕ್ಷಿತಗೊಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಜಾರಿಯಲ್ಲಿದೆ.