Friday, July 1, 2022

Latest Posts

ಕೊಳವೆ ಬಾವಿಗೆ ಬಿದ್ದ ಬಾಲಕ: ಮೂರು ದಿನಗಳಿಂದ ಮುಂದುವರೆದ ರಕ್ಷಣಾ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿತ್ತಲಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೊಳವೆ ಬಾವಿಯಲ್ಲಿ ಬಿದ್ದಿರುವ ಬಾಲಕನ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಛತ್ತೀಸ್‌ಘಡದ ಜಂಜಗಿರ್ ಚಂಪಾ ಜಿಲ್ಲೆಯ ಪಿರಿದ್ ಗ್ರಾಮದಲ್ಲಿ ಶುಕ್ರವಾರ 11 ವರ್ಷದ ರಾಹುಲ್ ಸಾಹು ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ವಿಜಯ್ ಅಗರ್ವಾಲ್ ರಕ್ಷಣಾ ಕಾರ್ಯಾಚರಣೆಗೆ ಸೂಚಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಸಹ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಬಾಲಕನನ್ನು ರಕ್ಷಿಸಲು ರಕ್ಷಣಾ ಪಡೆಗಳು ಮೂರು ದಿನಗಳಿಂದ ನಿರಂತರವಾಗಿ ಪ್ರಯತ್ನ ನಡೆಸುತ್ತಿವೆ. ಬಾಲಕ ಬಿದ್ದ ಬಾವಿ 80 ಅಡಿ ಆಳವಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ 50 ಅಡಿ ಅಗೆಯಲಾಗಿದ್ದು, 65 ಅಡಿವರೆಗೆ ಅಗೆದ ನಂತರ, ಬಾಲಕ ಸಿಕ್ಕಿಹಾಕಿಕೊಂಡಿರುವ ಸ್ಥಳಕ್ಕೆ ಸಮಾನಾಂತರವಾಗಿ ಮತ್ತೊಂದು ಸುರಂಗ ತೋಡಲಾಗುತ್ತದೆ. ಬಾಲಕ ಇನ್ನೂ ಜೀವಂತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸ್ಥಳದಲ್ಲಿದ್ದು, ಪರಿಸ್ಥಿತಿಯ ನಿಗಾ ವಹಿಸಿದ್ದಾರೆ. ಮತ್ತೊಂದೆಡೆ ಛತ್ತೀಸ್‌ಘಡದ ಸಿಎಂ ಕೂಡ ಘಟನೆಯ ಬಗ್ಗೆ ಮಾಹಿತಿ ಪಡೆದು ಪೋಷಕರಿಗೆ ಧೈರ್ಯ ತುಂಬಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss