ಹೊಸದಿಗಂತ ವರದಿ,ಚಿತ್ರದುರ್ಗ:
ಕಳೆದ ಅನೇಕ ವರ್ಷಗಳಿಂದ ಭ್ರಷ್ಟಾಚಾರ ನಡೆಸಿಕೊಂಡು ಬಂದಿದ್ದ ಕಾಂಗ್ರೆಸ್‌ನವರು ದೇಶದ ಜನತೆಗೆ ಕಷ್ಟ ಕೊಟ್ಟಿದ್ದರು. ಈಗ ಅವರು ಅದರ ಪ್ರತಿಫಲ ಅನುಭವಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧ ನಡೆದ ಇ.ಡಿ. ವಿಚಾರಣೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲಚಕ್ರ ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಏನೆಲ್ಲಾ ಅಕ್ರಮಗಳನ್ನು ಮಾಡಲಾಯಿತು. ಈಗ ಕಾಲಚಕ್ರ ಉರುಳಿದೆ. ಉಪ್ಪು ತಿಂದವರು ನೀರು ಕುಡಿಯುತ್ತಿದ್ದಾರೆ ಎಂದರು.
ಐ.ಟಿ., ಇ.ಡಿ. ಇಲಾಖೆಗಳನ್ನು ಬಿಜೆಪಿ ತನ್ನ ಅಂಗ ಸಂಸ್ಥೆಗಳಂತೆ ದುರುಪಯೋಗ ಮಾಡುತ್ತಿದೆ. ಹಾಗಾಗಿ ಅವೆರಡು ಇಲಾಖೆಗಳನ್ನು ಬಿಜೆಪಿಗೆ ಸೇರಿಸಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಒಬ್ಬ ಅನುಭವಿ ರಾಜಕಾರಣಿ ಈ ಎರಡು ಇಲಾಖೆಗಳ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್‌ನವರಿಗೆ ಅನುಕೂಲವಾಗುವ ಸಂದರ್ಭದಲ್ಲಿ ಈ ಇಲಾಖೆಗಳು ಸರಿ ಇದ್ದವು. ಈಗ ಕೇವಲ ರಾಜಕಾರಣಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.