ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಹತ್ತೇ ದಿನಗಳಲ್ಲಿ ಮೂರುಪಟ್ಟು ಏರಿಕೆಯಾಗುವ ಮೂಲಕ ಕೋವಿಡ್ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ಒಂದು, ಎರಡು, ಮೂರು ಅಲೆಗಳಲ್ಲಿ ತತ್ತರಿಸಿದ್ದ ಜನತೆಗೆ ಅದಾದ ಬಳಿಕ ಸೋಂಕಿನ ಇಳಿಕೆ ತುಸು ನೆಮ್ಮದಿ ಮೂಡಿಸಿತ್ತು. ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಕೂಡಾ ಇಳಿದಿತ್ತು. ಆದರೆ ಮೂರೂವರೆ ತಿಂಗಳ ಬಳಿಕ ಕೋವಿಡ್ ಮತ್ತೆ ಹೆಡೆಯೆತ್ತಿದ್ದು, ನಾಲ್ಕನೇ ಅಲೆ ಆರಂಭವಾಗಿದೆಯೇ ಎಂಬ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ. ಈಗ ಹರಡುತ್ತಿರುವುದು ಒಮಿಕ್ರಾನ್ ವೈರಸ್ ಆಗಿದ್ದು, ಇದರಿಂದ ನಾಲ್ಕನೇ ಅಲೆ ಉಂಟಾಗದು ಎಂದು ತಜ್ಞರು ಹೇಳುತ್ತಿದ್ದಾರಾದರೂ ಜನತೆಯಲ್ಲಿ ಆತಂಕ ಮಾತ್ರ ತಗ್ಗಿಲ್ಲ. ಸಮಾಧಾನದ ವಿಚಾರವೆಂದರೆ ಹತ್ತೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದ್ದರೂ, ಸಾವಿನ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಮಾತ್ರ ತೀವ್ರ ಇಳಿಮುಖವಾಗಿದೆ. ಹೆಚ್ಚಿನ ಕೊರೊನಾ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.