ಹೊಸದಿಗಂತ ವರದಿ, ಮೈಸೂರು:
ಮೈಸೂರು ಅಭಿವೃದ್ಧಿ ಕುರಿತು ತಮ್ಮೊಂದಿಗೆ ಚರ್ಚೆಗೆ ಬರುವಂತೆ ಸಂಸದ ಪ್ರತಾಪ್ ಸಿಂಹ ನೀಡಿದ್ದ ಪಂಥಾಹ್ವಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದಿನಾಂಕವನ್ನು ನಿಗದಿಪಡಿಸಿದ್ದು, ಜೂನ್ 29ರ ಮಧ್ಯಾಹ್ನ 12 ಗಂಟೆಗೆ ಸಂಸದರ ಕಚೇರಿಯಲ್ಲಿ ಚರ್ಚೆಗೆ ಸಿದ್ಧ ಎಂದು ತಿಳಿಸಿದರು.
ಶನಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಜಲದರ್ಶಿನಿಯಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿ ದಾಖಲೆ ಸಮೇತ ಹಾಜರಾಗುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ನಾನು ಎರಡನೇ ಬಾರಿಗೆ ಚರ್ಚೆಗೆ ಆಹ್ವಾನ ನೀಡುತ್ತಿದ್ದು, ಈ ಬಾರಿ ಪಲಾಯನ ಮಾಡಬೇಡಿ. ಜನರಿಗೆ ಸತ್ಯ ಹೇಳಲು ಯಾರಾದರೇನು ? ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮುಂದಿನ ವಿಧಾನಸಭೆ ಚುನಾವಣೆವರೆಗೂ ಎಸ್.ಟಿ ಸೋಮಶೇಖರ್ ಅವರೇ ಉಸ್ತುವಾರಿ ಸಚಿವರಾಗಿ ಮುಂದುವರಿಯಲಿ. ಎಸ್. ಟಿ ಸೋಮಶೇಖರ್ ಮೈಸೂರಿಗೆ ಬರುತ್ತಿರುವುದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸಲುವಾಗಿ. ಬಿಜೆಪಿ ಸ್ಥಳೀಯ ಮುಖಂಡರ ಜೊತೆ ಸೇರಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಹಾಗಾಗಿ ಅವರನ್ನೇ ಮುಂದುವರಿಸಿದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ಗ್ರಾಮ ಪಂಚಾಯತ್‌ನಲ್ಲೂ ಗೆಲ್ಲದ ವ್ಯಕ್ತಿ ಮುಂದೆ ಚರ್ಚೆ ಮಾಡೋಲ್ಲ ಎಂದು ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್ , ಗ್ರಾಮ ಪಂಚಾಯತ್ ನಲ್ಲಿ ಪಕ್ಷದ ಚಿಹ್ನೆ ಇಲ್ಲದೆ, ಇಬ್ಬರು ಸ್ಪರ್ಧಿಸೋಣ ಬನ್ನಿ. ವೈಯುಕ್ತಿಕ ವರ್ಚಸ್ಸಿನಿಂದ ಗ್ರಾ. ಪಂ ನಿಂದ ಆಯ್ಕೆಯಾಗಿ ಸಾಬೀತು ಪಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹೆಸರಿಲ್ಲದೆ ನೀವು ಗ್ರಾ.ಪಂ ಸದಸ್ಯನಾಗಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ನೀವು ಎಲ್ಲಿರುತ್ತೀರಿ ಎಂಬುದು ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು.