Monday, August 15, 2022

Latest Posts

ಮೈಸೂರು ಅಭಿವೃದ್ಧಿ ಕುರಿತು ನನ್ನೊಂದಿಗೆ ಸಿದ್ದರಾಮಯ್ಯ, ಮಹದೇವಪ್ಪ ಚರ್ಚೆಗೆ ಬರಲಿ: ಪ್ರತಾಪ್ ಸಿಂಹ

ಹೊಸದಿಗಂತ ವರದಿ, ಮೈಸೂರು:

ಮೈಸೂರು ಅಭಿವೃದ್ಧಿ ಕುರಿತು ನನ್ನೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ
ಚರ್ಚೆಗೆ ಬರಲಿ ಎಂದು ಸಂಸದ ಪ್ರತಾಪ್‌ಸಿಂಹ ಮತ್ತೆ ಸವಾಲು ಹಾಕಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಬರೀ ಬೊಗಳೆ ಬೀಡುತ್ತಾರೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ವೇದಿಕೆ ಬಂದು ಬಹಿರಂಗ ಚರ್ಚೆ ಮಾಡಿದರೆ ಬೊಗಳೆ ಬಿಡುತ್ತಿರುವವರು ಯಾರು ಎಂಬುದು ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.
ನಾನು ಅಂಕಿ ಅಂಶಗಳ ಸಮೇತ ಚರ್ಚೆಗೆ ಸಿದ್ಧನಿದ್ದೇನೆ. ನಾನೇ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪಗೆ ಪಂಥಾಹ್ವಾನ ಕೊಟ್ಟಿದ್ದೇನೆ. ನೀವು ಹೇಳಿದ ಸ್ಥಳ, ನೀವು ಹೇಳಿದ ವೇದಿಕೆ ಅಲ್ಲಿ ನಾನು ಒಬ್ಬನೇ ಬರುತ್ತೇನೆ. ನೀವು ಬನ್ನಿ ಖುಲ್ಲಂಖುಲ್ಲಾ ಚರ್ಚೆ ಮಾಡೋಣ. ಬೊಗಳೆ ಬಿಡುತ್ತಿರುವುದು ನೀವಾ? ನಾನಾ? ಎನ್ನುವುದು ಜನರಿಗೆ ಗೊತ್ತಾಗಲಿ. ಯಾವುದೇ ರೀತಿಯ ಚರ್ಚೆಗೂ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಅವರು ಈ ರೀತಿ ಬೊಗಳೆ ಬಿಟ್ಟಿದ್ದಕ್ಕೆ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ನನ್ನನ್ನು ಎರಡು ಬಾರಿ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಕೆಲಸ ಮಾಡಿದ್ದರೆ. ಟಿ. ನರಸೀಪುರ ಜನ ಮಹದೇವಪ್ಪನವರನ್ನು, ಚಾಮುಂಡೇಶ್ವರಿ ಕ್ಷೇತ್ರದ ಜನ ಸಿದ್ದರಾಮಯ್ಯನವರನ್ನು ಯಾಕೆ ಸೋಲಿಸುತ್ತಿದ್ದರು. ಸಿದ್ದರಾಮಯ್ಯ ಊರು ಬಿಡುವ ಪರಿಸ್ಥಿತಿ ಏಕೆ ತರುತ್ತಿದ್ದರು. ಅವರೇನೂ ಅಭಿವೃದ್ಧಿ ಕೆಲಸ ಮಾಡಿಲ್ಲ ಹಾಗಾಗಿ ಅವರನ್ನು ಸೋಲಿಸಿದ್ದಾರೆ. ಅಭಿವೃದ್ಧಿ ಚರ್ಚೆಗೆ ಪಂಥಾಹ್ವಾನ ಕೊಟ್ಟಿದ್ದೇನೆ. ದಂಡು ದಾಳಿ ಸಮೇತ ಚರ್ಚೆಗೆ ಬನ್ನಿ ಎಂದು ತಿಳಿಸಿದರು.
ನಾನು ಒಬ್ಬನೇ ಸಾಕ್ಷಿ ಸಮೇತ ಬರುತ್ತೇನೆ. ಚರ್ಚೆಗೆ ಬರದೇ ಮಾಧ್ಯಮದ ಕ್ಯಾಮರಾ ಮುಂದೆ ಬೊಗಳೆ ಬಿಡಬೇಡಿ. ನಿಮ್ಮದು ಉಗುಳೇ ಜಾಸ್ತಿಯಾಗಿದೆ. ಇದನ್ನು ಬಿಟ್ಟು ಚರ್ಚೆಗೆ ಬನ್ನಿ ಅಲ್ಲೇ ನಿಮ್ಮನ್ನು ಸೋಲಿಸುತ್ತೇನೆ ಎಂದು ಸವಾಲು ಹಾಕಿದರು.
ಜಲದರ್ಶಿನಿ ಬಳಿ ಆರು ಪಥದ ರಸ್ತೆಗೆ ಮಹದೇವಪ್ಪ ಅವಧಿಯಲ್ಲಿ 12 ಕೋಟಿ ಬಿಡುಗಡೆ ಮಾಡಿಸಿದ್ದೀರಿ, ಆದರೆ ಯಾವುದೇ ರಸ್ತೆ ಮಾಡಿಸಿಲ್ಲ. ಇಂತಹ ಮಹದೇವಪ್ಪರಿಂದ ನನಗೆ ಅಭಿವೃದ್ಧಿಯ ಪಾಠ ಹೇಳುವುದು ಬೇಡ ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರದ್ದು ಹುಳುಕು ಮನಸ್ಥಿತಿ. ಆದ್ದರಿಂದ ಎಲ್ಲದರಲ್ಲೂ ಹುಳುಕು ಹುಡುಕುತ್ತಾರೆ. ಬಿಜೆಪಿಗೆ ಮೂರು ಬಾರಿ ರಾಷ್ಟ್ರಪತಿ ಆಯ್ಕೆಗೆ ಅವಕಾಶ ಸಿಕ್ಕಿದೆ. ಒಮ್ಮೆ ಅಬ್ದುಲ್ ಕಲಾಂ, ಮತ್ತೊಮ್ಮೆ ಎಸ್ ಸಿ ಸಮುದಾಯದ ರಾಮನಾಥ್ ಕೋವಿಂದ್, ಈಗ ಬುಡಕಟ್ಟು ಜನಾಂಗದ ದ್ರೌಪದಿ ಅವರನ್ನು ಆಯ್ಕೆ ಮಾಡಲಾಗಿದೆ. ಹಿಂದುಳಿದವರಿಗೆ ಅವಕಾಶ ಸಿಗಲಿ ಎನ್ನುವುದು ಬಿಜೆಪಿ ಪಕ್ಷದ ಆಶಯವಾಗಿದೆ. ಆ ಆಶಯದಂತೆ ರಾಷ್ಟ್ರಪತಿಗಳ ಆಯ್ಕೆ ನಡೆದಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss