ನೈಟ್‌ ಕ್ಲಬ್‌ ದುರಂತ: ಅನುಮಾನಾಸ್ಪದವಾಗಿ 20 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್‌ನಲ್ಲಿರುವ ಟೌನ್‌ಶಿಪ್ ನೈಟ್‌ಕ್ಲಬ್‌ನಲ್ಲಿ 20 ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದಾಗಿ ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಗಳು ಭಾನುವಾರ ವರದಿ ಮಾಡಿವೆ. ಕ್ಲಬ್‌ನಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ 17 ಮಂದಿ ಸಾವನ್ನಪ್ಪಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಕೆಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದರಿಂದ ಸಾವಿನ ಸಂಖ್ಯೆ 20ಕ್ಕೆ ಏರಿದೆ. ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರ್ಕಾರದ ಭದ್ರತಾ ವಿಭಾಗದ ಮುಖ್ಯಸ್ಥ ವೆಜಿವ್ ಟಿಕಾನಾ-ಗ್ಸೋಥಿವ್ ಹೇಳಿದ್ದಾರೆ.

ಪೂರ್ವ ಲಂಡನ್‌ನ ಸೀನರಿ ಪಾರ್ಕ್‌ನಲ್ಲಿರುವ ನೈಟ್‌ಕ್ಲಬ್‌ನಲ್ಲಿ ನಡೆದ ಸಾವಿನ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಬ್ರಿಗೇಡಿಯರ್ ಥೆಂಬಿಂಕೋಸಿ ಕಿನಾನಾ ಹೇಳಿದರು. ಮೃತರೆಲ್ಲರೂ 18ರಿಂದ 20 ವರ್ಷದೊಳಗಿನ ಯುವಕರು ಎಂದು ಗುರುತಿಸಲಾಗಿದೆ. ದುರಂತಕ್ಕೆ ಕಾಲ್ತುಳಿತ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿವೆ. ಇದನ್ನು ಅಲ್ಲಗಳೆದಿರುವ ಈಸ್ಟರ್ನ್ ಕೇಪ್ ಪ್ರಾಂತೀಯ ಸಮುದಾಯ, ಸುರಕ್ಷತಾ ವಿಭಾಗದ ಅಧಿಕಾರಿ ಯುನಾತಿ ಬಿಂಕೋಸ್, ಸಾವಿಗೆ ಕಾಲ್ತುಳಿತ  ಕಾರಣವಲ್ಲ ಮೃತರ ದೇಹಗಳ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಹಾಗೂ ಈ ದುರ್ಘಟನೆ ಕಾಲ್ತುಳಿತದಿಂದ ಸಂಭವಿಸಿದ್ದು ಎಂದರೆ ನಂಬಲಸಾಧ್ಯ ಎಂದಿದ್ದಾರೆ.

ಜೋಹಾನ್ಸ್‌ಬರ್ಗ್‌ನಿಂದ ದಕ್ಷಿಣಕ್ಕೆ 1,000 ಕಿಲೋಮೀಟರ್ ದೂರದಲ್ಲಿನ ಹಿಂದೂ ಮಹಾಸಾಗರದ ಕರಾವಳಿಯಲ್ಲಿರುವ ನಗರದ ಕ್ಲಬ್‌ಗೆ ಮೃತರ ಕುಟುಂಬ ಸದಸ್ಯರು ಬಂದು ತಮ್ಮ ಮಕ್ಕಳ ಮೃತದೇಹ ಒಪ್ಪಿಸುವಂತೆ ಮನವಿ ಮಾಡಿದರು. ತನಿಖೆ ನಡೆಸುತ್ತಿದ್ದು, ಈಗ ಶವಗಳನ್ನು ನಿಮಗೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂಬುದನ್ನು ಪೊಲೀಸರು ಮನವರಿಕೆ ಮಾಡಿಕೊಟ್ಟರು. ಪರೀಕ್ಷೆ ಮುಗಿದ ನಂತರ ಮಾಡಿದ ಪಾರ್ಟಿ 20 ಮಂದಿ ಸಾವಿಗೆ ಹೇಗೆ ಕಾರಣವಾಯ್ತು ಎಂಬುದು ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!