ಹೊಸದಿಗಂತ ವರದಿ, ಕಲಬುರಗಿ:
ಕಟ್ಟಿಗೆ ಯಂತ್ರದಲ್ಲಿ ಕಾರ್ಮಿಕನೊಬ್ಬನ ಕೈ ಸಿಲುಕಿ ಕತ್ತರಿಸಿದ್ದನ್ನು ಪುನರ ಜೋಡಣೆ ಮಾಡಿರುವ ಆಕ್ಸನ್ ಆಸ್ಪತ್ರೆ ವೈದ್ಯರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸಿಯಾಗಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಸಂತೋಷ ಮಂಗಶೆಟ್ಟಿ ವಿವರಣೆ ನೀಡಿದರು.
ಘಟನೆ ಹಿನ್ನೆಲೆ: ಕಳೆದ ಜೂನ್ 13 ರಂದು ಚಿತ್ತಾಪುರದ ಸಾಮಿಲ್ (ಕಟ್ಟಿಗೆ ಅಡ್ಡ)ನಲ್ಲಿ ಕೆಲಸ ಮಾಡುತ್ತಿದ್ದ ಬಡ ಕೂಲಿಕಾರ್ಮಿಕನೊಬ್ಬನು ಕಟ್ಟಿಗೆ ಕತ್ತರಿಸುವಾಗ ಎಡಹಸ್ತ ಯಂತ್ರದಡಿ ಸಿಲುಕಿ ತುಂಡಾಗಿದ್ದರು. ಅಲ್ಲಿನ ಕಾರ್ಮಿಕರು ಪ್ಲಾಸ್ಟಿಕ ಚೀಲದಲ್ಲಿ ಕತ್ತರಿಸಿರುವ ಎಡಗೈ ಅನ್ನು ಆಸ್ಪತ್ರೆಗೆ ನೇರವಾಗಿ ಬಂದು ತಲುಪಿಸಿದ್ದಾರೆ. 24 ಮಜ್ಜೆ, ಮೂರು ಪ್ರಧಾನ ಮೂಳೆ, ಐದು ರಕ್ತನಾಳಗಳು ಸಂಪೂರ್ಣ ಹಾನಿಗೊಳಗಾಗಿದ್ದವು.
ಕಾರ್ಮಿಕನ ದೇಹದಿಂದ ರಕ್ತ ಪೂರ್ತಿ ಸೋರಿಕೆಯಾಗಿದ್ದರಿಂದ ಕೇವಲ ಆರು ಗ್ರಾಂ ರಕ್ತ ಮಾತ್ರ ಉಳಿದಿತ್ತು. ಕತ್ತರಿಸಿದ ಕೈಜೋಡಿಸುವುದಂತೂ ಕನಸಿನ ಮಾತಾಗಿತ್ತು. ಆದರೂ ಆಕ್ಸನ್ ಆಸ್ಪತ್ರೆಯ ಯುವ ವೈದ್ಯರ ತಂಡ ದೃತಿಗೇಡದ ತಮ್ಮ ಅನುಭವ ಮತ್ತು ಸೇವಾ ಬದ್ಧತೆಯನ್ನು ನಂಬಿಶಸ್ತ್ರ ಚಿಕಿತ್ಸೆ ಮಾಡಲು ಮುಂದಾದರು.
ಪ್ಲಾಸ್ಟಿಕ್ ಸರ್ಜನ್ ಡಾ. ಅಮರೇಶ ಬಿರಾದಾರ್ ನೇತೃತ್ವದಲ್ಲಿ ವೈದ್ಯರ ತಂಡ ಸತತ 8 ಗಂಟೆವರೆಗೂ ಶಸ್ತ್ರಚಿಕಿತ್ಸೆ ಮಾಡಿ ಸಫಲರಾದರು. ಮುರಿದುಬಿದ್ದ ಹಸ್ತವನ್ನು ಪ್ಲಾಸ್ಟಿಕ್ ಚೀಲದಿಂದ ಬಿಡಿಸಿಕೊಂಡು ಅಕ್ಷರಶಃ ತುಂಡಾಗಿದ್ದ ಕಿರು ಬೆರಳು ಮಾತ್ರ ಉಳಿದುಕೊಂಡಿದ್ದ ಮಾಂಸ ಜೋಡಿಸಿದ್ದು ಹರಿದ ಬಟ್ಟೆಗೆ ತುಂಡು ಜೋಡಿಸಿ ಹೊಲಿದಂತೆ ಪ್ರಯಾಸದಾಯಕವಾಗಿತ್ತು. ಹಂತ ಹಂತವಾಗಿ ರೋಗಿಯ ಆರೋಗ್ಯದಲ್ಲಿ ಚೇತರಿಸಿಕೊಂಡು ಪವಾಡ ಸದೃಶ್ಯ ಕಾರ್ಯ ಮಾಡಿ ರೋಗಿಯ ಮೊಗದಲ್ಲಿ ನಗು ತರಿಸಲಾಗಿದೆ ಎಂದರು.