ಹೊಸದಿಗಂತ ವರದಿ ಮಡಿಕೇರಿ:
ಭೂಕಂಪನದ ತೀವ್ರತೆ ಕಂಡು ಬಂದಿರುವ ಕೊಡಗಿನ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ, ಹಿರಿಯ ಭೂವಿಜ್ಞಾನಿಗಳು ಜಿಲ್ಲೆಗೆ ಭೇಟಿ ನೀಡಿ ಭೂಕಂಪನದ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಕೊಡಗು ರಕ್ಷಣಾ ವೇದಿಕೆ ಆಗ್ರಹಿಸಿದೆ.
ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್, ನಿರಂತರ ಭೂಕಂಪನದಿಂದ ಜನರು ಆತಂಕಗೊಂಡಿದ್ದು, ಹಿರಿಯ ಭೂವಿಜ್ಞಾನಗಳ ಭೇಟಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಕೊಡಗಿನ ಗಡಿ ಭಾಗವಾದ ಸಂಪಾಜೆ, ಚೆಂಬು, ಪೆರಾಜೆ, ಕರಿಕೆ, ಗಾಳಿಬೀಡು, ಭಾಗಮಂಡಲ ಮತ್ತಿತರ ಭಾಗಗಳಲ್ಲಿ ಕೆಲವು ದಿನಗಳಿಂದ ಭೂಕಂಪನವಾಗುತ್ತಿದೆ. ಇದರಿಂದ ಜನರು ತೀವ್ರ ಆತಂಕಗೊಂಡಿದ್ದಾರೆ. ಗಣಿಗಾರಿಕೆಯಿಂದ ಭೂಕುಸಿತ ಉಂಟಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಿರಿಯ ಭೂವಿಜ್ಞಾನಿಗಳು ಭೂಕಂಪನ ಸಂಭವಿಸಿದ ಗ್ರಾಮಗಳಿಗೆ ತೆರಳಿ ಜನರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕೆಂದು ಸುರೇಶ್ ಒತ್ತಾಯಿಸಿದ್ದಾರೆ.