ಹೊಸದಿಗಂತ ವರದಿ, ಮಡಿಕೇರಿ:
ರಾಜಸ್ಥಾನದ ಉದಯ್’ಪುರ್’ನಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಪ್ರಕರಣವನ್ನು ಖಂಡಿಸಿರುವ ಕೊಡಗು ಜಿಲ್ಲಾ ಬಿಜೆಪಿ, ಈ ಹತ್ಯೆಗೆ ಅಲ್ಲಿನ ಕಾಂಗ್ರೆಸ್ ಸರಕಾರ ಜನ ಸಾಮಾನ್ಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದೇ ಕಾರಣ ಎಂದು ಟೀಕಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ ಅವರು, ನೂಪುರ್ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕನ್ಹಯ್ಯ ಲಾಲ್’ರನ್ನು ಠಾಣೆಗೆ ಕರೆಸಿದ್ದರು. ನಂತರ ತಮಗೆ ಜೀವ ಭಯ ಇರುವುದಾಗಿ ಮತ್ತು ಪೊಲೀಸ್ ರಕ್ಷಣೆ ಬೇಕೆಂದು ಕನ್ಹಯ್ಯ ಲಾಲ್ ಕೇಳಿಕೊಂಡಿದ್ದರು. ಆದರೂ ಪೊಲೀಸರು ರಕ್ಷಣೆ ನೀಡಿರಲಿಲ್ಲ.ಆದ್ದರಿಂದ ಈ ಹತ್ಯೆಯ ಹಿಂದೆ ಪೊಲೀಸ್ ವೈಫಲ್ಯ ಮತ್ತು ಅಲ್ಲಿನ ಕಾಂಗ್ರೆಸ್ ಸರಕಾರ ಜನಸಾಮಾನ್ಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಬೆಂಬಲಿಸಿ ಪೋಷಿಸುತ್ತಾ ಬರುತ್ತಿದ್ದು, ದೇಶದ ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆಯೋ ಅಲ್ಲೆಲ್ಲಾ ಬಹುಸಂಖ್ಯಾತ ಹಿಂದುಗಳ ವಿರುದ್ಧ ಷಡ್ಯಂತ್ರ ಮತ್ತು ಒಳ ಸಂಚನ್ನು ಮಾಡುತ್ತಾ ಬರಲಾಗುತ್ತಿದೆ.
ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಮಾನಸಿಕತೆ ಬಗ್ಗೆ ಬುದ್ಧಿಜೀವಿಗಳ ಮೌನವೇಕೆ ಎಂದು ಪ್ರಶ್ನಿಸಿರುವ ಜೈನಿ ಅವರು, ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಮತ್ತು ಎಲ್ಲಾ ರಂಗದಲ್ಲೂ ವಿಫಲತೆ ಕಂಡಿರುವ ರಾಜಸ್ಥಾನನದ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕು. ಅಲ್ಲದೆ ಕನ್ಹಯ್ಯಲಾಲ್ ಹತ್ಯಾ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲೂ ಈ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 24 ಹಿಂದೂ ಕಾರ್ಯಕರ್ತರ ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿತ್ತು. ಮತ ಬ್ಯಾಂಕ್ ರಾಜಕಾರಣಕ್ಕಾಗಿ ದೇಶ ವಿರೋಧಿ ಸಂಘಟನೆಗಳ ಮುಖಂಡರ ಮೇಲಿದ್ದ ಪ್ರಕರಣಗಳನ್ನು ಅಂದಿನ ಸರಕಾರ ರದ್ದು ಮಾಡಿತ್ತು. ಈಗ ಅಧಿಕಾರಲ್ಲಿ ಇಲ್ಲದಿರುವಾಗಲೂ ಗಲಭೆಗೆ ಪ್ರಚೋದನೆ ನೀಡುತ್ತಾ, ಕೇವಲ ಒಂದು ವರ್ಗವನ್ನು ಮಾತ್ರ ಓಲೈಸುತ್ತಾ ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.