ಮಣ್ಣಿನಡಿ ರಹಸ್ಯವಾಗಿ ಹೂತಿಟ್ಟಿದ್ದ ಮುಲ್ಲಾ ಒಮರ್ ನ ಕಾರು ಹೊರತೆಗೆದ ತಾಲೀಬಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅಫ್ಘಾನಿಸ್ತಾನದಲ್ಲಿ ರಕ್ತಸಿಕ್ತ ಅಂತರ್ಯುದ್ಧದ ನಂತರ 1996 ರಲ್ಲಿ ಕಠಿಣ ಇಸ್ಲಾಮಿಸ್ಟ್ ಚಳುವಳಿಯನ್ನು ಅಧಿಕಾರಕ್ಕೆ ತಂದ ಮುಲ್ಲಾ ಓಮರ್, ತಾಲಿಬಾನ್ ಸಂಘಟನೆಯನ್ನು ಸ್ಥಾಪಿಸಿ ದೇಶದಲ್ಲಿ ಕಟ್ಟುನಿಟ್ಟಾದ ಇಸ್ಲಾಮಿಕ್ ಕಾನೂನನ್ನು ಜಾರಿಗೆ ತಂದ.
ಜಗತ್ತಿನ ಬಲಿಷ್ಠ ರಾಷ್ಟ್ರ ಅಮೇರಿಕದ ಮೇಲೆ ನಡೆಸಿದ ಭೀಕರ 9/11 ದಾಳಿ ತಾಲೀಬಾನ್‌ ಪಾಲಿಗೆ ಮುಳುವಾಗಿ ಪರಿಣಮಿಸಿತು. ಸೇಡಿಗೆ ಬಿದ್ದ ಯುಎಸ್ ಪಡೆಗಳು ತಾಲಿಬಾನಿಗಳನ್ನು ಬೆನ್ನಟ್ಟಿ ಬಂದು ಬೇಟೆಯಾಡಲಾರಂಭಿಸಿದವು. ಆ ಸಂದರ್ಭದಲ್ಲಿ ಅಮೆರಿಕಾದ ಪಡೆಗಳಿಂದ ತಪ್ಪಿಸಿಕೊಳ್ಳಲು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಬಳಸಿದ ಕಾರನ್ನು ಪೂರ್ವ ಅಫ್ಘಾನಿಸ್ತಾನದಲ್ಲಿ ಉತ್ಖನನ ಮಾಡಲಾಗಿದೆ, ಅದನ್ನು ಕಳೆದ ಎರಡು ದಶಕಗಳಿಂದ ಅಮೆರಿಕಾದ ಕಣ್ಣುತಪ್ಪಿಸಿ ಮುಚ್ಚಿಡಲಾಗಿತ್ತು.
ಅಫ್ಘಾನಿಸ್ಥಾನದ ಜಬುಲ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಮುಲ್ಲಾ ಓಮರ್ ಬಳಸುತ್ತಿದ್ದ ಬಿಳಿ ಟೊಯೊಟಾ ಕೊರೊಲ್ಲಾ ಕಾರನ್ನು ಹೂತಿಡಲಾಗಿತ್ತು. ಅದನ್ನು ಈ ವಾರ ಹೊರತೆಗೆಯಲು ಆದೇಶಿಸಲಾಗಿತ್ತು ಎಂದು ತಾಲಿಬಾನ್ ಅಧಿಕಾರಿ ಅಬ್ದುಲ್ ಜಬ್ಬಾರ್ ಒಮಾರಿ ಹೇಳಿದ್ದಾರೆ.
“ಟೊಯೋಟಾ ಕಾರು ಇನ್ನೂ ಉತ್ತಮ ಸ್ಥಿತಿಯಲ್ಲಿದೆ, ಅದರ ಮುಂಭಾಗ ಮಾತ್ರ ಸ್ವಲ್ಪ ಹಾನಿಯಾಗಿದೆ” ಎಂದು ಜಬುಲ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ರಹಮತುಲ್ಲಾ ಹಮ್ಮದ್ ಹೇಳಿದ್ದಾರೆ.
“ಈ ವಾಹನ ತಾಲೀಬಾನಿಗಳಿಗೆ ಅಮೂಲ್ಯ ವಸ್ತು. ಇದು  ಕಳೆದುಹೋಗುವುದನ್ನು ತಪ್ಪಿಸಲು 2001 ರಲ್ಲಿ ಒಮರ್ ಅವರ ಸ್ಮಾರಕವಾಗಿ ಮುಜಾಹಿದ್ದೀನ್‌ಗಳು ಸಮಾಧಿ ಮಾಡಿದ್ದರು” ಎಂದು ಅವರು ಹೇಳಿದ್ದಾರೆ. ಕಾರನ್ನು ಭೂಮಿಯಡಿಯಿಂದ ಹೊರತೆಗೆಯುತ್ತಿರುವ ಚಿತ್ರವನ್ನು ಚಿತ್ರಗಳನ್ನು ತಾಲಿಬಾನ್ ಮಾಧ್ಯಮಗಳು ಪ್ರಕಟಿಸಿವೆ.
ರಾಜಧಾನಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಈ ಕಾರನ್ನು “ದೊಡ್ಡ ಐತಿಹಾಸಿಕ ಸ್ಮಾರಕ” ಎಂದು ಪ್ರದರ್ಶಿಸಲು ತಾಲಿಬಾನ್ ಸಿದ್ಧತೆ ನಡೆಸುತಿತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನವು ನಂತರ ಸೆಪ್ಟೆಂಬರ್ 11 ರ ದಾಳಿಯ ರೂವಾರಿಯಾದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್-ಖೈದಾ ಸೇರಿದಂತೆ ಜಿಹಾದಿಸ್ಟ್ ಗುಂಪುಗಳಿಗೆ ಆಶ್ರಯತಾಣವಾಗಿತ್ತು. ಬಿನ್ ಲಾಡೆನ್ ಅನ್ನು ಹಸ್ತಾಂತರಿಸಲು ತಾಲಿಬಾನ್ ನಿರಾಕರಿಸಿದಾಗ, ಯುಎಸ್ ಮತ್ತು ಅದರ ಮಿತ್ರಪಕ್ಷಗಳು ಅಫ್ಘಾನಿಸ್ತಾನದ ಮೇಲೆ ವಾಯುದಾಳಿಗಳನ್ನು ಪ್ರಾರಂಭಿಸಿದವು, ಆಕ್ರಮಣದ ಬಳಿಕ ತಾಲಿಬಾನ್ ಅನ್ನು ಅಧಿಕಾರದಿಂದ ತೆಗೆದುಹಾಕಿ ಅಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದವು. ಈ ಸಂಘರ್ಷದ ವೇಳೆ ಮುಲ್ಲಾ ಒಮರ್ ಟೊಯೋಟಾ ಕೊರೊಲ್ಲಾ ಬಳಸಿ ಕಂದಹಾರ್‌ ನಿಂದ ಹೊರಬಿದ್ದಿದ್ದ. ಆಬಳಿಕ ಭೂಗತನಾಗಿದ್ದ ಆತ 2013 ರಲ್ಲಿ ಸಾವನ್ನಪ್ಪಿದ್ದ. ಆದರೆ ತಾಲೀಬಾನಿಗಳು ಹಲವಾರು ವರ್ಷಗಳವರೆಗೆ ಆತನ ಸಾವನ್ನು ರಹಸ್ಯವಾಗಿಟ್ಟಿದ್ದರು.
ಸುಮಾರು ಎರಡು ದಶಕಗಳ ಕಾಲ ರಕ್ತಸಿಕ್ತ ದಂಗೆಯ ನಾಡು ಅಫಘಾನಿಸ್ತಾನವನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಅಮೆರಿಕ ಕಳೆದ ವರ್ಷ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದೆ. ಆ ಬಳಿಕ ತಾಲಿಬಾನ್ ದೇಶಾದ್ಯಂತ ವ್ಯಾಪಿಸಿ ಕಾಬೂಲ್ ಅನ್ನು ವಶಪಡಿಸಿಕೊಂಡು ಅಧಿಕಾರಕ್ಕೆ ಮರಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here