-ಹರೀಶ್ ಕೆ.ಆದೂರು
ಜೈನಕಾಶಿ, ಬಸದಿಗಳ ಬೀಡು, ಶಿಕ್ಷಣ ಕಾಶಿ, ಐತಿಹಾಸಿಕ ಪ್ರಸಿದ್ಧಿಯ ಮೂಡುಬಿದಿರೆಯಲ್ಲಿ ಕನ್ನಡಮ್ಮನ ಸೇವೆ ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ನಡೆಯಲಿದೆ. ಇದೇ ಡಿಸಂಬರ್ ತಿಂಗಳು ಕನ್ನಡಾಸಕ್ತ ಮನಸ್ಸುಗಳು ಮೂಡುಬಿದಿರೆಯಲ್ಲಿ `ಹಬ್ಬ’ ಆಚರಿಸಲಿದ್ದಾರೆ. ಕೊರೊನಾದಂತಹ ಸಂಕಷ್ಟಗಳು, ಪ್ರಕೃತಿಯ ಮುನಿಸು ಈ ಅಡೆತಡೆಗಳು ಕನ್ನಡ ಹಬ್ಬ `ಆಳ್ವಾಸ್ ನುಡಿಸಿರಿ’ ಎಂಬ ಕನ್ನಡ ನಾಡು ನುಡಿಯ ಸಾಹಿತ್ಯ ಸಮ್ಮೇಳನವನ್ನು ಕಳೆದ ಮೂರು ವರ್ಷಗಳಿಂದ ಆಚರಿಸಲು ಅಡ್ಡಿ ಪಡಿಸಿತ್ತು. ಇದೀಗ ಪರಿಸ್ಥಿತಿ ಕೊಂಚ ಮಟ್ಟಿಗೆ ತಿಳಿಯಾಗಿದ್ದು ಈ ಬಾರಿ ಕನ್ನಡಮ್ಮನ ತೇರು ಮೂಡುಬಿದಿರೆಯಲ್ಲಿ ಸಂಚರಿಸಲು `ಮುಹೂರ್ತ’ನಿಗದಿಯಾಗಿದೆ.
ಯಾವಾಗ?
ಇದೇ ಡಿಸಂಬರ್ ತಿಂಗಳ 16,17 ಮತ್ತು 18ರಂದು ಕನ್ನಡ ನಾಡು ನುಡಿ ಸಂಸ್ಕೃತಿಯ ಬೃಹತ್ ಹಬ್ಬ ಆಳ್ವಾಸ್ ನುಡಿಸಿರಿ ಮೂಡುಬಿದಿರೆಯ `ವಿದ್ಯಾಗಿರಿ’ ಭವ್ಯ ಸಭಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು ಹತ್ತು ಹಲವು ಹೊಸತನಗಳೊಂದಿಗೆ ಮತ್ತೊಮ್ಮೆ ವೈಭವೋಪೇತದಿಂದ, ಶಿಸ್ತುಬದ್ಧವಾಗಿ, ಮಹತ್ವಪೂರ್ಣ ವಿಚಾರಮಂಡನೆಗಳೊಂದಿಗೆ ನುಡಿಸಿರಿ ಸಮ್ಮೇಳನ ನಡೆಯಲಿದೆ.
ಕಳೆದ ಮೂರು ವರುಷಗಳಲ್ಲಿ ನಮ್ಮ ಕನ್ನಡ ನಾಡು, ದೇಶ ದೊಡ್ಡಮಟ್ಟದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗಿಹೋಗಿದೆ. ಒಂದೆಡೆ ಪ್ರಾಕೃತಿಕ ವಿಕೋಪಗಳು, ಮತ್ತೊಂದೆಡೆ ಕೊರೊನಾ ತಂದಿಟ್ಟ ಸಂಕಷ್ಟ ಇವೆಲ್ಲವುಗಳಿಂದ ಅಕ್ಷರಶಃ ಜನತೆ ಕಂಗೆಟ್ಟು ಹೋಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಹೊಸ ಬಗೆಯ ಚರ್ಚೆಗಳು ನಡೆಯಲಿವೆ. ಗಂಭೀರ ಚಿಂತನ ಮಂಥನಗಳು ಈ ಬಾರಿಯ ನುಡಿಸಿರಿಯಲ್ಲಾಗಲಿದೆ.
ಐದು ವೇದಿಕೆಗಳು:
ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿಯ ಸಮ್ಮೇಳನದಲ್ಲಿ ಐದು ವಿಭಿನ್ನ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲಾಪಗಳು ಮೂರು ದಿನಗಳ ಕಾಲ ನಡೆಯಲಿವೆ. ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳ ಶ್ರೇಷ್ಠ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಲಿವೆ.
ಸಂಪೂರ್ಣ ಉಚಿತ
ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನದಲ್ಲಿ ಸಂಪೂರ್ಣ ಉಚಿತ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಮನಸ್ಸುಗಳು ಮತ್ತೊಮ್ಮೆ ಸಹಜ ಸ್ಥಿತಿಯಲ್ಲಿ ಜೀವನ ರೂಪಿಸುವಂತಾಗಬೇಕೆಂಬ ಸದುದ್ದೇಶದಿಂದ ಮಹೋನ್ನತ ವಿಚಾರ ಧಾರೆಗಳು ಎಲ್ಲಾ ಜನತೆಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ. ಸದಸ್ಯತ್ವ ಶುಲ್ಕ ನೂರು ರುಪಾಯಿ ಸಾಂಕೇತಿಕವಾಗಿ ಇಡಲಾಗಿದೆ. ಉಚಿತ ಊಟೋಪಚಾರದೊಂದಿಗೆ ಉಚಿತ ವಸತಿ ವ್ಯವಸ್ಥೆ ಮೂರು ದಿನಗಳ ಕಾಲ ಲಭ್ಯವಿದೆ. ಕನ್ನಡಾಸಕ್ತ ಮನಸ್ಸುಗಳು ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಿನಂತಿಸಿದ್ದಾರೆ.
25 ಸಾವಿರ ಮಂದಿಗೆ ವಸತಿ
ಆಳ್ವಾಸ್ ಕ್ಯಾಂಪಸ್‌ನ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು 25ಸಾವಿರ ಮಂದಿಗೆ ಉಳಿದುಕೊಳ್ಳುವಂತಹ ಅದ್ಭುತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಸಕ್ತರು ವಸತಿಗೆ ಮನವಿ ಮಾಡಿದ್ದೇ ಆದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ಅಮೃತಮಹೋತ್ಸವಕ್ಕೆ ಕೊಡುಗೆ
ಸ್ವಾತಂತ್ಯೋತ್ಸವದ ಅಮೃತಮಹೋತ್ಸವಕ್ಕೆ ಒಂದು ಕೊಡುಗೆ ಎಂಬಂತೆ ಆಳ್ವಾಸ್ ನುಡಿಸಿರಿ ಮತ್ತು ಸ್ಕೌಟ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿ ಅದ್ದೂರಿಯಾಗಿ ಮೂಡುಬಿದಿರೆಯ ನೆಲದಲ್ಲಿ ನಡೆಯಲಿದೆ. ಯುವಶಕ್ತಿ ಸಶಕ್ತವಾಗಬೇಕೆಂಬ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಯುವಜನತೆ ಕನ್ನಡಾಸಕ್ತ ಮನಸ್ಸುಗಳು ಏಕಮನಸ್ಸಿನಿಂದ ಇದರಲ್ಲಿ ಭಾಗವಹಿಸಬೇಕು. ಮತ್ತೆ ಸಶಕ್ತರಾಗಿ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ.