ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇಂದ್ರ ಸರ್ಕಾರವು ಘೋಷಿಸಿದ ಜಿಎಸ್ಟಿ ದರಗಳ ಪರಿಷ್ಕರಣೆ ಕುರಿತಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದು, ಮೋದಿ ನೇತೃತ್ವದ ಸರ್ಕಾರದ ಈ ಕ್ರಮ ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಆರ್ಥಿಕತೆಯನ್ನು ನಾಶಪಡಿಸುವಂತಹದ್ದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದರ ಏರಿಕೆಯಿಂದಾಗಿ ದುಬಾರಿಯಾದ ವಸ್ತುಗಳ ಪಟ್ಟಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ರಾಹುಲ್, ಕೇಂದ್ರ ವಿಧಿಸಿದ ತೆರಿಗೆಯ ಕುರಿತಾಗಿ “ಗಬ್ಬರ್ ಸಿಂಗ್ ಟ್ಯಾಕ್ಸ್” ಮರಳಿ ಬಂದಿದೆ ಎಂದು ಕರೆದು ವ್ಯಂಗ್ಯವಾಡಿದ್ದಾರೆ. ʼಜನರಿಗೆ ಉದ್ಯೋಗ ನೀಡುವ ಬದಲಾಗಿ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೇಗೆ ನಾಶಪಡಿಸಬಹುದು ಎಂಬುದನ್ನು ಬಿಜೆಪಿ ತೋರಿಸಿಕೊಡುತ್ತಿದೆʼ ಎಂದು ಲೇವಡಿ ಮಾಡಿದ್ದಾರೆ.
HIGH taxes, NO jobs
BJP’s masterclass on how to destroy what was once one of the world’s fastest growing economies. pic.twitter.com/cinP1o65lB
— Rahul Gandhi (@RahulGandhi) July 18, 2022
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಜಿಎಸ್ಟಿ ದರ ಪರಿಷ್ಕರಣೆ ಕ್ರಮವನ್ನು ಟೀಕಿಸಿದ್ದಾರೆ. ʼಹೆಚ್ಚಿನ ಭಾರತೀಯರು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಈ ಸಮಯದಲ್ಲಿ ಜಿಎಸ್ಟಿ ದರ ಏರಿಕೆ ಕ್ರಮವು ಜನರಿಗೆ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸಲಿದೆʼ. ʼಏರುತ್ತಿರುವ ಹಣದುಬ್ಬರದ ಹೊಣೆಯ ಭಾರವನ್ನು ʼಆಮ್ ಆದ್ಮಿʼ ಹೆಗಲಿಗೆ ವರ್ಗಾಯಿಸುವ ಮೂಲಕ ಕೇಂದ್ರ ಸರ್ಕಾರವು ಬೇಜವಾಬ್ದಾರಿತನ ಪ್ರದರ್ಶಿಸಿದೆʼ ಎಂದು ಅವರು ಕಿಡಿಕಾರಿದ್ದಾರೆ.