– ಸುರೇಶ ವಗ್ಗಾ
ಕೇವಲ ಒಂದು ಮುಕ್ಕಾಲು ಎಕರೆ ಜಮೀನಿನಲ್ಲಿ ತೋಟಗಾರಿಕೆ, ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ ಮಾಡುವ ಮೂಲಕ ಯುವ ಕೃಷಿಕರಿಗೆ ಇಂಜನವಾರಿ ರೈತ ಮಾದರಿಯಾಗಿದ್ದಾರೆ. ಗುಳೇದಗುಡ್ಡ ಸಮೀಪದ ಇಂಜನವಾರಿ ಗ್ರಾಮದ ಪ್ರಗತಿಪರ ರೈತ ತಿಪ್ಪಣ್ಣ ಶಿವನಗೌಡ ಗೌಡರ ತಮಗಿರುವ ಒಂದು ಎಕರೆ 35 ಗುಂಟೆ ಖುಷ್ಕಿ ಜಮೀನಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಮೂಲಕ ಹನಿ ನೀರಾವರಿ ಮಾಡಿಕೊಂಡಿದ್ದಾರೆ.
ಕಳೆದ 13 ವರ್ಷಗಳಿಂದ ಕೃಷಿಯಲ್ಲಿ ವಿವಿಧ ಪ್ರಯೋಗ ಮಾಡುತ್ತ ಇರುವ ಚಿಕ್ಕಜಮೀನಿನಲ್ಲಿ 100 ತೆಂಗು, 100 ಲಿಂಬೆ, 20 ಪೇರಲ, 20 ಕರಿಬೇವು, ಮಲ್ಲಿಗೆ ಹೂವು, ಮಹಾಗಣಿ ಮರ, ಮೋಸಂಬಿ, ನುಗ್ಗೆ ಗಿಡ ಬೆಳೆಸಿದ್ದಾರೆ. ಇದರ ನಡುವೆ ಬದನೆಕಾಯಿ, ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ.
ಸದಾ ಹೊಸದನ್ನು ಹುಡುಕುವ ತಿಪ್ಪಣ್ಣ ಸಾಮಾಜಿಕ ಮಾಧ್ಯಮದ ಮೂಲಕ ಡ್ರ್ಯಾಗನ್ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡು 35 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಫ್ರುಟ್ ಹಣ್ಣಿನ ಬೆಳೆ ನಾಟಿ ಮಾಡಿದ್ದು, ಹಣ್ಣು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಬೆಳೆಗಳಿಗೆ ಎಮ್ಮೆ, ಕುರಿ, ಕೋಳಿ ಹಾಗೂ ಎರೆಹುಳು ಗೊಬ್ಬರ ಬಳಸುತ್ತಾರೆ. ತಾವೇ ಜೀವಾಮೃತ ತಯಾರಿಸಿ, ಬೆಳೆಗಳಿಗೆ ಉಪಯೋಗಿಸುತ್ತಾರೆ.
16 ಸದಸ್ಯರ ತುಂಬು ಕುಟಂಬದ ತಿಪ್ಪಣ್ಣ ಗೌಡರ ಅವರು ತಮಗಿರುವ ಜಮೀನು ಸಾಲದು ಎಂದು ಮೂರು ಎಕರೆ ಜಮೀನನ್ನು ಲಾವಣಿ ಪಡೆದು ಆ ಜಮೀನಿನಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಇವರ ಇಡೀ ಕುಟುಂಬ ಕೃಷಿ ಅವಲಂಬಿಸಿದೆ.
ಹೈನುಗಾರಿಕೆ, ಕುರಿ,ಕೋಳಿ ಸಾಕಾಣಿಕೆ: ಜಮೀನಿನಲ್ಲಿ ತರಾವರಿ ಬೆಳೆ ಬೆಳೆದು ಯಶಸ್ವಿಯಾಗಿ ಎಮ್ಮೆಗಳನ್ನು ಸಾಕಿದ್ದಾರೆ. ಅಲ್ಲದೇ ಹೊಲದಲ್ಲಿಯೇ ಕುರಿ ಫಾರ್ಮ್ ಮಾಡಿ ಸುಮಾರು 70 ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಹಾಗೂ ಜವಾರಿ ಕೋಳಿಗಳನ್ನು ಸಾಕಾಣಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ. ತಿಪ್ಪಣ್ಣ ಗೌಡರ ಅವರು ಕೃಷಿಯಲ್ಲಿ ಸದಾ ಹೊಸ ಪ್ರಯೋಗ ಅನುಸರಿಸುತ್ತಿದ್ದು, ಜೇನು ಸಾಕಾಣಿಕೆ ಸಹ ಮಾಡಿದ್ದಾರೆ. ಮುಂದೆ ಮೀನು ಸಾಕಾಣಿಕೆ ಮಾಡುವ ಯೋಜನೆ ಹೊಂದಿದ್ದಾರೆ.