ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ–ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಸಾಗುತ್ತಿರುವ ಮಧ್ಯೆ, ದೇಶೀಯ ಕ್ರಿಕೆಟ್ ವಲಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ಕಂಡುಬಂದಿದೆ. t20 ಸ್ವರೂಪದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ರಾಜ್ಯ ತಂಡಗಳ ಘೋಷಣೆ ಪ್ರಾರಂಭವಾಗಿದ್ದು, ತಮಿಳುನಾಡು ತಂಡದ ನಾಯಕತ್ವವನ್ನು ಈ ಬಾರಿ ಭಾರತದ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ವಹಿಸಲಾಗಿದೆ. ಕರ್ನಾಟಕದ ಬೀದರ್ ಮೂಲದ ವರುಣ್ ಗೆ ಇದು ಮಹತ್ತರ ಜವಾಬ್ದಾರಿ.
ನವಂಬರ್ 26ರಿಂದ ಟೂರ್ನಿ ಆರಂಭವಾಗಲಿದ್ದು, ತಮಿಳುನಾಡು ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ ವಿರುದ್ಧ ಆಡಲಿದೆ. ಟೀಂ ಇಂಡಿಯಾದ ಟೀ20 ತಂಡದಲ್ಲಿ ಈಗ ಮಹತ್ತರ ಸ್ಥಾನ ಪಡೆದಿರುವ ವರುಣ್, 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ್ದರೂ, ಆರಂಭದಲ್ಲಿ ಅವಕಾಶಗಳು ಸೀಮಿತವಾಗಿದ್ದವು. ಆದರೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ, ವರುಣ್ಗೆ ನಿರಂತರ ಅವಕಾಶಗಳು ಸಿಕ್ಕಿದ್ದು, ಅವರು ಈಗ ತಂಡದ ಪ್ರಮುಖ ಸ್ಪಿನ್ ಶಸ್ತ್ರವಾಗಿದ್ದಾರೆ.
ಇಲ್ಲಿಯವರೆಗೆ ನಾಲ್ಕು ಏಕದಿನ ಮತ್ತು 29 T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅವರು, 45 T20 ವಿಕೆಟ್‌ಗಳೊಂದಿಗೆ ಗಮನ ಸೆಳೆದಿದ್ದಾರೆ. 17 ರನ್‌ಗಳಿಗೆ 5 ವಿಕೆಟ್ ಅವರ ಅತ್ಯುತ್ತಮ ಸಾಧನೆ.
ತಮಿಳುನಾಡು ತಂಡದಲ್ಲಿ ನಾರಾಯಣ ಜಗದೀಸನ್, ಶಾರುಖ್ ಖಾನ್, ಸಾಯಿ ಕಿಶೋರ್, ನಟರಾಜನ್ ಸೇರಿದಂತೆ ಅನುಭವಿಗಳಿದ್ದಾರೆ. ವರುಣ್ ನೇತೃತ್ವದಲ್ಲಿ ಯುವ–ಅನುಭವಿಗಳ ಸಂಯೋಜನೆಯ ಈ ತಂಡ ಟೂರ್ನಿಯಲ್ಲಿ ಹೇಗೆ ಮಿಂಚುತ್ತದೆ ಎನ್ನುವುದು ಈಗ ಕುತೂಹಲದ ವಿಷಯವಾಗಿದೆ.

