ವಿಶ್ವ ಕ್ರಿಕೆಟ್‌ ನಲ್ಲಿ IPL ಪ್ರಾಬಲ್ಯ ಬಿಗ್‌ ಬ್ಯಾಷ್‌ ಗೆ ಮಾರಕ:‌ ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ ಗಿಲ್‌ ಕ್ರಿಸ್ಟ್‌ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ವಿಶ್ವ ಕ್ರಿಕೆಟ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್ ಆಡಮ್ ಗಿಲ್‌ಕ್ರಿಸ್ಟ್ ಪ್ರಶ್ನಿಸಿದ್ದಾರೆ. ಪ್ರಸ್ತುತ ಐಪಿಎಲ್‌ ತೋರುತ್ತಿರುವ “ಏಕಸ್ವಾಮ್ಯ” ಪ್ರವೃತ್ತಿ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಇತರೆ ಪ್ರಾಂಚೈಸಿ ಲೀಗ್‌ ಗಳಲ್ಲಿ ಅಪಾರ  ಬೇಡಿಕೆ ಹೊಂದಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ ಮನ್ ಡೇವಿಡ್ ವಾರ್ನರ್ ಮುಂಬರುವ ಬಿಗ್ ಬ್ಯಾಷ್ ಲೀಗ್ (BBL)ನಿಂದ ಹೊರಗುಳಿಯಲಿರುವ ಕುರಿತಾದ ವರದಿಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಗಿಲ್‌ಕ್ರಿಸ್ಟ್ ವಾರ್ನರ್‌ ವಿಚಾರವನ್ನಿಟ್ಟುಕೊಂಡು ಐಪಿಎಲ್‌ ಮೇಲೆ ಟೀಕೆಗಳನ್ನು ಮಾಡಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆದ ಐಪಿಎಲ್‌ ಆಟಗಾರರಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಇದರಿಂದಾಗಿ ಆಟಗಾರರು ತಮ್ಮ ದೇಶದ ಲೀಗ್‌ ಗಳಿಂದ ಹಿಂದೆ ಸರಿದು, ಐಪಿಎಲ್‌ ಆಡಲು, ಆ ಟೂರ್ನಿಗೆ ಸಿದ್ಧತೆಗಳನ್ನು ನಡೆಸಲು ಹೆಚ್ಚಿನ ಸಮಯ ನೀಡುತ್ತಿದ್ದಾರೆ. ಇದು ಇತರೆ ದೇಶಗಳ ಲೀಗ್‌ ಗಳ ಮೇಲೆ ಪರಿಣಾಮ ಬೀರುತ್ತಿದೆ. ಲೀಗ್‌ ಕ್ರಿಕೆಟ್‌ ಎಂಬುದು ಐಪಿಎಲ್‌ ನ ಏಕಸಾಮ್ಯವಾಗುವತ್ತ ಸಾಗುತ್ತಿದೆ ಎಂದು ಗಿಲ್‌ ಕ್ರಿಸ್ಟ್‌ ಆತಂಕ ವ್ಯಕ್ತಪಡಿಸಿದ್ದಾರೆ.
ವಾರ್ನರ್‌ BBL ನಿಂದ ವಿಶ್ರಾಂತಿ ಪಡೆದು ಹೆಚ್ಚಿನ ಲಾಭದಾಯಕವಾದ ಯುನೈಟೆಡ್ ಅರಬ್ ಎಮಿರೇಟ್ಸ್ T20 ಲೀಗ್‌ ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ವರದಿಗಳಿವೆ. ಕುತೂಹಲಕಾರಿ ವಿಚಾರವೆಂದರೆ ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈ ಲೀಗ್‌ನಲ್ಲಿ ಹೂಡಿಕೆ ಮಾಡಿವೆ. ಬಿಗ್‌ ಬ್ಯಾಷ್‌ ನಿಂದ ವಾರ್ನರ್‌ ಹೊರಗುಳಿಯುವ ವಿಚಾರ ಗಿಲ್‌ ಕ್ರಿಸ್ಟ್‌ ಬೇಸರಕ್ಕೆ ಕಾರಣವಾಗಿದೆ.
ಡೇವಿಡ್ ವಾರ್ನರ್ ಅವರ ಮೇಲೆ ಒತ್ತಡ ಹೇರಿ BBL ನಲ್ಲಿ ಆಡಿಸಲು ಸಾಧ್ಯವಿಲ್ಲವೆಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ ಮತ್ತಷ್ಟು ಕ್ರಿಕೆಟಿಗರು ಸದ್ಯದಲ್ಲೇ ವಾರ್ನರ್ ಅವರ ಹಾದಿಯನ್ನು ಹಿಡಿಯಬಹುದು. ಐಪಿಎಲ್‌ ಈಗ ಜಾಗತಿಕ ಕ್ರಿಕೆಟನ್ನು ಆಳುತ್ತಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಹ ಹಲವಾರು ತಂಡಗಳನ್ನು ಖರೀದಿಸಿರುವ ಫ್ರಾಂಚೈಸಿಗಳು ಪ್ರಾಬಲ್ಯವನ್ನು ಸೃಷ್ಟಿಸಲು ಪ್ರಾರಂಭಿಸಿವೆ. ಕ್ರಿಕೆಟ್‌ ನ ಮಾಲೀಕತ್ವ ಮತ್ತು ಪ್ರತಿಭೆಗಳನ್ನು ಒಂದೇ ಸಂಸ್ಥೆ ನಿಯಂತ್ರಿಸುವುದು ಅಪಾಯಕಾರಿ. ಅವರು ಆಟಗಾರರು ಎಲ್ಲಿ ಆಡಬಹುದು ಮತ್ತು ಆಡಬಾರದು ಎಂಬುದನ್ನು ನಿರ್ಧರಿಸುತ್ತಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ವಿಚಾರವನ್ನು ಬೇಗನೆ ಅರಿಯಬೇಕು ಎಂದು ವಾಟ್ಲೆ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗಿಲ್‌ ಕ್ರಿಸ್ಟ್ ಸಲಹೆ ನೀಡಿದ್ದಾರೆ.
ಆಸ್ಟೇಲಿಯಾ ಪರ 96 ಟೆಸ್ಟ್‌ಗಳು, 287 ಏಕದಿನ ಮತ್ತು 13 ಟಿ20 ಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿರುವ ಗಿಲ್‌ಕ್ರಿಸ್ಟ್, ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳಾದ ಡೆಕ್ಕನ್ ಚಾರ್ಜಸ್ ಮತ್ತು ಈಗ ಪಂಜಾಬ್ ಕಿಂಗ್ಸ್ ಗಾಗಿ ಆಡಿದ್ದರು. ಅವರು 2009 ರಲ್ಲಿ ಡೆಕ್ಕನ್ ಚಾರ್ಜಸ್ ಅನ್ನು ಚೊಚ್ಚಲ ಐಪಿಎಲ್ ಪ್ರಶಸ್ತಿಯತ್ತ ಮುನ್ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!