ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಮೇಲೆ ರಷ್ಯಾ ಭೀಕರ ಯುದ್ಧ ಸಾರಿ 6 ತಿಂಗಳಾಗುತ್ತಿದೆ. ಅಧ್ಯಕ್ಷ ಝೆಲೆನ್ಸ್ಕಿ ಯುದ್ಧದಲ್ಲಿ ಪುಟ್ಟ ರಾಷ್ಟ್ರ ಉಕ್ರೇನ್ ಅನ್ನು ಮುನ್ನಡೆಸಿದ ರೀತಿ, ಸೋಲೊಪ್ಪಿಕೊಳ್ಳದ ಅವರ ವ್ಯಕ್ತಿತ್ವ ದೇಶವಿದೇಶಗಳಲ್ಲಿ ಝೆಲೆನ್ಸ್ಕಿ ವರ್ಚಸ್ಸನ್ನು ಹೆಚ್ಚಿಸಿದೆ. ಈ ನಡುವೆ ಝೆಲೆನ್ಸ್ಕಿ ಅವರ ಒಂದು ನಡೆ ಜನರಿಂದ ಟೀಕೆಗೆ ಒಳಗಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಕ್ರೇನ್ ದೇಶವನ್ನು ಧ್ವಂಸಗೊಳಿಸುತ್ತಿರುವ ಭೀಕರ ಯುದ್ಧದ ನಡುವೆಯೇ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಪತ್ನಿ ಒಲೆನಾ ಝೆಲೆನ್ಸ್ಕಾ ಅವರೊಂದಿಗೆ ನಿಯತಕಾಲಿಕದ ಮುಖಪುಟಕ್ಕಾಗಿ ಫೋಟೋಶೂಟ್ ಗೆ ಪೋಸ್ ನೀಡುವ ಮೂಲಕ ಟ್ರೋಲ್ ಆಗುತ್ತಿದ್ದಾರೆ.
ಕಳೆದ ಫೆಬ್ರವರಿ 24 ರಿಂದ ಉಕ್ರೇನ್ ರಷ್ಯಾದೊಂದಿಗೆ ಯುದ್ಧದಲ್ಲಿ ತೊಡಗಿದೆ. ಸಾವಿರಾರು ಉಕ್ರೇನಿಯನ್ನರು ಸತ್ತಿದ್ದಾರೆ. ಹಲವರು ದೇಶ ತೊರೆದಿದ್ದಾರೆ. ಉಕ್ರೇನ್ ಮಾನವ ಇತಿಹಾಸದ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಈ ನಡುವೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವೋಗ್ ನ ಮ್ಯಾಗಜೀನ್ ಒಂದರ ಫೋಟೋಶೂಟ್ ನಲ್ಲಿ ಮಗ್ನರಾಗಿರುವುದು ಜನರಿಗೆ ಸಿಟ್ಟು ತರಿಸಿದೆ.
ಒಂದು ಫೋಟೋದಲ್ಲಿ ದಂಪತಿ ಸೇನಾ ವಾಹನದೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಫೋಟೋದಲ್ಲಿ ಮೂವರು ಉಕ್ರೇನಿಯನ್ ಸೈನಿಕರು ಇದ್ದಾರೆ, ಇವರು ದೇಶದ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾರ ಕಾವಲು ಕಾಯುತ್ತಿದ್ದಾರೆ. ಇನ್ನೊಂದರಲ್ಲಿ ಒಲೆನಾಮಿಲಿಟರಿ ಬಂಕರ್ ನ ಮರಳಿನ ಚೀಲಗಳಿಂದ ತುಂಬಿದ ಸ್ಥಳದಲ್ಲಿ ನಿಂತಿದ್ದಾರೆ. ಇದರಲ್ಲಿ ಝೆಲೆನ್ಸ್ಕಿ ರಕ್ಷಕನಂತೆ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಗಳನ್ನು ಒಲೆನಾ ಝೆಲೆನ್ಸ್ಕಾತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ರಷ್ಯಾ ಉಕ್ರೇನಿಯನ್ನರ ಮೇಲೆ ಬಾಂಬುಗಳನ್ನು ಸುರಿಯುತ್ತಿರುವಾಗ ಅಧ್ಯಕ್ಷರು ಫೋಟೊಶೂಟ್ ಗಳಲ್ಲಿ ಮಗ್ನರಾಗಿದ್ದಾರೆ. ಇದೇನಾ ನಿಮ್ಮ ಬದ್ಧತೆ? ಎಂದು ಟ್ವಿಟರ್ ಬಳಕೆದಾರರು ಟೀಕಿಸಿದ್ದಾರೆ.