Friday, November 14, 2025

‘ವೃಕ್ಷಮಾತೆ’ ತಿಮ್ಮಕ್ಕನ ನಿಧನಕ್ಕೆ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಇಡೀ ಜೀವನವನ್ನು ಮರಗಳನ್ನು ನೆಟ್ಟು ಪೋಷಿಸುವುದಕ್ಕಾಗಿ ಮುಡಿಪಾಗಿಟ್ಟಿದ್ದ, ಕೋಟ್ಯಂತರ ಜನರಿಗೆ ಪರಿಸರ ಕಾಳಜಿಯ ಪಾಠ ಹೇಳಿಕೊಟ್ಟ ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಅವರು 114 ವರ್ಷ ವಯಸ್ಸಿನಲ್ಲಿ ಇಂದು ನಿಧನರಾಗಿದ್ದಾರೆ. ನಿಜವಾದ ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಅಗಲಿಕೆಗೆ ನಾಡಿನಾದ್ಯಂತ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಮರಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಬೆಳೆಸಿದ ಅವರ ಕಾರ್ಯವು ಸಾರ್ವಜನಿಕ ಸೇವೆ ಮತ್ತು ನಿಸ್ವಾರ್ಥ ಪ್ರೀತಿಯ ನಿಜವಾದ ಉದಾಹರಣೆಯಾಗಿದೆ. ಅವರ ಈ ಅಪ್ರತಿಮ ಕೊಡುಗೆಗಾಗಿ ಅವರು ‘ಸಾಲುಮರದ ತಿಮ್ಮಕ್ಕ’ ಎಂದೇ ಪ್ರಸಿದ್ಧರಾಗಿದ್ದಾರೆ.

ಪವನ್ ಕಲ್ಯಾಣ್ ಅವರಿಂದ ಭಾವುಕ ಶ್ರದ್ಧಾಂಜಲಿ

ಸಾಲುಮರದ ತಿಮ್ಮಕ್ಕನವರ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ನೆರೆಯ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ಧೀರ್ಘವಾದ ಪೋಸ್ಟ್ ಮಾಡುವ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ.

ಪವನ್ ಕಲ್ಯಾಣ್ ಅವರು ತಮ್ಮ ಸಂದೇಶದಲ್ಲಿ, “ಒಂದೆಡೆ ಸ್ವಾರ್ಥ ಲಾಭಕ್ಕಾಗಿ ಮರಗಳನ್ನು ನಿರ್ದಯವಾಗಿ ಕಡಿದು ಕಾಡು ನಾಶ ಮಾಡುತ್ತಿರುವುದನ್ನು ನೋಡಿದ್ದೇವೆ. ಆದರೆ ಮತ್ತೊಂದೆಡೆ ಪ್ರಕೃತಿಗೆ ಸಂಪೂರ್ಣವಾಗಿ ಸಮರ್ಪಣೆ ಮಾಡಿದ ವಿನಮ್ರ ವ್ಯಕ್ತಿ – ಸಾಲುಮರದ ತಿಮ್ಮಕ್ಕ, ‘ವೃಕ್ಷಗಳ ತಾಯಿ’ಯನ್ನು ನಾವು ಕಂಡಿದ್ದೇವೆ” ಎಂದು ಹೇಳಿದ್ದಾರೆ.

“ಕರ್ನಾಟಕದ ಸಣ್ಣ ಹಳ್ಳಿಯವರಾದ ತಿಮ್ಮಕ್ಕ ಮತ್ತು ಅವರ ಪತಿ, ಮಕ್ಕಳಿಲ್ಲದಿದ್ದಾಗ ಹಸಿರು ಕುಟುಂಬವನ್ನು ಬೆಳೆಸುವ ಮೂಲಕ ತಮ್ಮ ಜೀವನದ ಉದ್ದೇಶವನ್ನು ಕಂಡುಕೊಂಡರು. ಅವರು ಶುದ್ಧ ಪ್ರೀತಿ ಮತ್ತು ಶ್ರಮದಿಂದ ಜಗತ್ತಿಗೆ ಉಸಿರು ನೀಡುವ ಹಸಿರು ಉಡುಗೊರೆಯನ್ನು ನೀಡಿದರು. 375 ಭವ್ಯವಾದ ಆಲದ ಮರಗಳು ಸೇರಿದಂತೆ 8,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದರು. ಅವರ ಜೀವನವು ಸಂಪತ್ತು ಅಥವಾ ಅಧಿಕಾರಕ್ಕಾಗಿ ಇರಲಿಲ್ಲ, ಬದಲಿಗೆ ಭೂಮಿ ತಾಯಿಗೆ ಬೇಷರತ್ತಾದ ಪ್ರೀತಿಯಾಗಿತ್ತು” ಎಂದು ತಿಮ್ಮಕ್ಕನವರ ಶ್ರೇಷ್ಠತೆಯನ್ನು ಕೊಂಡಾಡಿದ್ದಾರೆ.

ಪವನ್ ಕಲ್ಯಾಣ್ ಅಂತಿಮವಾಗಿ, “ಇಂದು, 114 ವರ್ಷ ವಯಸ್ಸಿನಲ್ಲಿ ಈ ಪ್ರಕೃತಿ ರಕ್ಷಕಿ ನಮ್ಮನ್ನು ಅಗಲಿದ್ದಾರೆ. ಅವರ ಜೀವನವು ನಿಜವಾದ ಸಾರ್ವಜನಿಕ ಸೇವೆಯ ಪಾಠವಾಗಿದೆ. ನಾವು ನಮ್ಮ ವೃಕ್ಷಗಳ ತಾಯಿಯನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಆತ್ಮವು ನಮ್ಮೊಂದಿಗೆ ಉಳಿದಿದೆ. ಪರಿಸರ ಸಂರಕ್ಷಣೆಯ ಕಡೆಗೆ ಕೆಲಸ ಮಾಡಲು ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ” ಎಂದು ನುಡಿನಮನ ಸಲ್ಲಿಸಿದ್ದಾರೆ.

error: Content is protected !!