ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ಮಹತ್ವಾಕಾಂಕ್ಷೆಯ ‘ಹೆಬ್ಬಾಳದಿಂದ ಸಿಲ್ಕ್ ಬೋರ್ಡ್’ ಟನಲ್ ರಸ್ತೆ ನಿರ್ಮಾಣ ಯೋಜನೆಗೆ ವಿರೋಧದ ಸರಮಾಲೆಯೇ ಎದುರಾಗಿದೆ. ಲಾಲ್ ಬಾಗ್‌ನ ಪರಿಸರಕ್ಕೆ ಹಾನಿ ಮತ್ತು ಸಂಚಾರ ದಟ್ಟಣೆ ಹೆಚ್ಚಳದ ಆರೋಪಗಳ ನಡುವೆಯೇ, ಇದೀಗ ಈ ಸುರಂಗ ಮಾರ್ಗವು ನಗರದ ಅಂತರ್ಜಲ ಮೂಲಗಳಿಗೆ ಕುತ್ತು ತರಲಿದೆ ಎಂಬ ಗಂಭೀರ ಆತಂಕವನ್ನು ತಜ್ಞರು ಮತ್ತು ಪರಿಸರ ಪ್ರಿಯರು ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಯೋಜನೆಯು ಭೂಮಿಯ ಪದರಗಳ ಮೇಲೆ ಒತ್ತಡ ಹೇರಿ, ಅಂತರ್ಜಲ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ವಿರೋಧದ ನಡುವೆಯೇ ಕಾಮಗಾರಿಗೆ ಮುಹೂರ್ತ
ಯೋಜನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದರೂ, ರಾಜ್ಯ ಸರ್ಕಾರವು ಟನಲ್ ರಸ್ತೆಯನ್ನು ನಿರ್ಮಿಸಲು ತುದಿಗಾಲಲ್ಲಿ ನಿಂತಿದೆ. ಹೊಸ ವರ್ಷದ ಆರಂಭದಲ್ಲೇ, ಅಂದರೆ ಜನವರಿ ಅಂತ್ಯ ಅಥವಾ ಫೆಬ್ರವರಿಯ ಆರಂಭದಲ್ಲಿ, ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಸರ್ಕಾರ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಟಿಬಿಎಂ ಯಂತ್ರಗಳ ಮೂಲಕ ಸುರಂಗ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲು ಯೋಜನೆ ರೂಪಿಸಲಾಗಿದೆ.
ವಿಪಕ್ಷಗಳಿಂದ ಹೋರಾಟದ ಸಮರ: ಸ್ಯಾಂಕಿ ಕೆರೆ ಪರಿಶೀಲನೆ
ಸರ್ಕಾರದ ಟನಲ್ ರಸ್ತೆ ಯೋಜನೆಯನ್ನು ಆರಂಭದಿಂದಲೂ ವಿರೋಧಿಸುತ್ತಿರುವ ವಿರೋಧ ಪಕ್ಷದ ನಾಯಕರು ಮತ್ತೊಮ್ಮೆ ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಇತ್ತೀಚೆಗೆ ಲಾಲ್ ಬಾಗ್ ಮುಂದೆ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದ ಬಿಜೆಪಿ ನಾಯಕರು, ಇಂದು ಟನಲ್ ರಸ್ತೆ ಹಾದುಹೋಗುವ ಮಾರ್ಗವನ್ನು ಪರಿಶೀಲಿಸಲು ಸಜ್ಜಾಗಿದ್ದಾರೆ.
ಆರ್. ಅಶೋಕ್ ನೇತೃತ್ವದ ನಿಯೋಗವು ಸ್ಯಾಂಕಿ ಕೆರೆ ಅಂಗಳದಲ್ಲಿ ರೌಂಡ್ಸ್ ಹಾಕಿ, ಜಲಮೂಲಕ್ಕೆ ಟನಲ್ ರಸ್ತೆಯಿಂದಾಗುವ ಅಪಾಯದ ಬಗ್ಗೆ ಸರ್ಕಾರದ ಕಣ್ಣು ತೆರೆಸಲು ಮುಂದಾಗಿದೆ.
ಸಂಚಾರ ದಟ್ಟಣೆಯ ಕಿರಿಕಿರಿಯನ್ನು ಕೊನೆಗೊಳಿಸಲು ದೊಡ್ಡ ಟನಲ್ ರಸ್ತೆ ಯೋಜನೆಯ ಕನಸು ಕಂಡಿದ್ದ ಸರ್ಕಾರಕ್ಕೆ, ಇದೀಗ ಒಂದಿಲ್ಲೊಂದು ಅಡೆತಡೆಗಳು ಎದುರಾಗುತ್ತಿವೆ. ಲಾಲ್ ಬಾಗ್‌ಗೆ ಹಾನಿಯಾಗುವುದಿಲ್ಲ ಎಂದು ಈಗಾಗಲೇ ಸಮರ್ಥನೆ ನೀಡಿದ್ದ ಸರ್ಕಾರ, ಇದೀಗ ಜಲಮೂಲಗಳಿಗೆ ಎದುರಾಗುವ ಅಪಾಯದ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

