ಹೊಸದಿಗಂತ ವರದಿ, ಮೈಸೂರು:
ಇಲ್ಲಿನ ಮಾನಸಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಹಾಗೂ ಅವರ ಆಪ್ತ ಸಹಾಯಕ ದೇವರಾಜು ಅವರು ಮುಕ್ತ ವಿವಿಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ ಮಂಗಳವಾರ ಹಲ್ಲೆ ನಡೆಸಿದ ಆರೋಪ ಇದೀಗ ಕೇಳಿ ಬಂದಿದೆ.
ಕೆಎಸ್‌ಓಯುವಿನಲ್ಲಿ ಪರೀಕ್ಷಾಂಗ ಭವನದ ಕೊಠಡಿಯಲ್ಲಿ ಇಂದು ಮಧ್ಯಾಹ್ನ ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ತಡವಾಗಿ ಕಚೇರಿಗೆ ಬಂದಿದ್ದಕ್ಕೆ ಕುಲಪತಿ ಪ್ರೊ. ವಿದ್ಯಾಶಂಕರ್ ಹಾಗೂ ಅವರ ಆಪ್ತ ಸಹಾಯಕ ದೇವರಾಜು ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಕೊಠಡಿಗೆ ಕರೆದುಕೊಂಡು ಹೋಗಿ, ಪ್ರದೀಪ್‌ಗಿರಿ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಪ್ರದೀಪ್ ಗಿರಿ ಅವರ ಮುಖ ಹಾಗೂ ಕಿವಿಗೆ ಗಾಯವಾಗಿ, ರಕ್ತ ಬಂದಿದೆ. ಘಟನೆ ಬಳಿಕ ಹಲ್ಲೆಗೊಳಗಾದ ಪ್ರದೀಪ್ ಗಿರಿ, ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರದೀಪ್ ಗಿರಿ ಅವರನ್ನು ಪೊಲೀಸರು ನಗರದ ಕೆ.ಆರ್ ಆಸ್ಪತ್ರೆಗೆ ಕರೆದೊಯ್ದ ವೈದ್ಯಕೀಯ ಪರೀಕ್ಷೆ ನಡೆಸಿ, ಚಿಕಿತ್ಸೆ ಕೊಡಿಸಿದ್ದಾರೆ.