ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮ ದೇವತೆಯ ಜಾತ್ರೆಯಲ್ಲಿ ಅನ್ನದಾನಕ್ಕೆ ಸಿದ್ಧಮಾಡುತ್ತಿದ್ದ ಕೊತ ಕೊತ ಕುದಿಯುವ ಪಾತ್ರೆಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಮಧುರೈನಲ್ಲಿ ನಡೆದಿದೆ. ಮಧುರೈ ಜಿಲ್ಲೆಯ ಸುಬ್ರಹ್ಮಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಪಳಂಗನಟ್ಟಿ ಗ್ರಾಮದ ಗ್ರಾಮಸ್ಥರು ಕಳೆದ ತಿಂಗಳು ಗ್ರಾಮ ದೇವತೆ ಮುತ್ತು ಮಾರಿಯಮ್ಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಅನ್ನದಾನ ಮಾಡಲು ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು.
ಆ ವೇಳೆ ಗ್ರಾಮದ ಮುತ್ತುಕುಮಾರ್ (54) ಎಂಬ ವ್ಯಕ್ತಿ ಅಲ್ಲಿಗೆ ಬಂದಿದ್ದಾನೆ. ಅಲ್ಲಿಗೆ ಬಂದ ತಕ್ಷಣ ತಲೆಸುತ್ತು ಬಂದು ಪಕ್ಕದಲ್ಲಿದ್ದ ದೊಡ್ಡ ಅಡುಗೆ ಪಾತ್ರೆಯನ್ನು ಹಿಡಿಯಲು ಯತ್ನಿಸಿ ವಿಫಲವಾಗಿ ಪಾತ್ರೆಯೊಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಆತನನ್ನು ಕಾಪಾಡಲು ಪ್ರಯತ್ನಿಸಿದಾದರೂ ಗಂಜಿಯ ಬಿಸಿಗೆ ಅದು ಸಾಧ್ಯವಾಗಲಿಲ್ಲ. ನಾಲ್ಕೈದು ಜನ ಹಿಡಿದು ಒಮ್ಮೆಲೆ ಎಳೆದು ಕೂಡಲೇ ಪಾತ್ರೆ ಸಮೇತ ಮುತ್ತುಕುಮಾರ್ ಕೆಳಗೆ ಬಿದ್ದಿದ್ದಾರೆ. ಗಂಜಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಗಾಯಗೊಂಡಿದ್ದು, ತಕ್ಷಣ ಅವರನ್ನು ಮಧುರೈನ ರಾಜಾಜಿ ಆಸ್ಪತ್ರೆಗೆ ಸಾಗಿಸಲಾಯ್ತು. ಗಂಭೀರ ಗಾಯಗೊಂಡಿದ್ದ ಮುತ್ತುಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಇದೇ ತಿಂಗಳ 2ರಂದು ಮೃತಪಟ್ಟರು.
ತನ್ನ ಪತಿ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಅಡುಗೆ ಮಾಡುವ ಸ್ಥಳದಲ್ಲಿ ಫಿಟ್ಸ್ ಬಂದು ಬ್ಯಾಲೆನ್ಸ್ ತಪ್ಪಿ ಗಂಜಿ ಪಾತ್ರೆಯೊಳಗೆ ಬಿದ್ದಿದ್ದಾನೆ ಎಂದು ಮುತ್ತುಕುಮಾರ್ ಪತ್ನಿ ಸುಬ್ರಮಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಜುಲೈ 25 ರಂದು ನಡೆದಿದ್ದು, ಆಗಸ್ಟ್ 2 ರಂದು ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.