ಕಾಶ್ಮೀರದ ಭಯೋತ್ಪಾದಕ ಕೃತ್ಯಕ್ಕೆ ಬಿಟ್‌ಕಾಯಿನ್‌ ಮೂಲಕ ಹಣ ಸಂದಾಯ: ಹಲವೆಡೆ ದಾಳಿಮಾಡಿದ ಎಸ್‌ಐಎ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಬಿಟ್‌ಕಾಯಿನ್ ಮಾರ್ಗವನ್ನು ಬಳಸಲಾಗುತ್ತಿದೆ ಎಂಬ ಸುಳಿವಿನ ಆಧಾರದ ಮೇಲೆ ಜಮ್ಮು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಬುಧವಾರ ಕೇಂದ್ರಾಡಳಿತ ಪ್ರದೇಶದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ. ಸಾಮೂಹಿಕ ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಪಾಕಿಸ್ತಾನದ ಮಾಸ್ಟರ್‌ಮೈಂಡ್ ಕಾಶ್ಮೀರದಲ್ಲಿನ ತನ್ನ ಏಜೆಂಟರಿಗೆ ಬಿಟ್‌ಕಾಯಿನ್‌ ಮುಂತಾದ ವಾಮಮಾರ್ಗದ ಮೂಲಕ ಹಣ ಸಂದಾಯ ಮಾಡುತ್ತಿದ್ದಾನೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮೆಂಧರ್, ಪೂಂಚ್, ಬಾರಾಮುಲ್ಲಾ, ಕುಪ್ವಾರ ಮತ್ತು ಹಂದ್ವಾರದಲ್ಲಿ ಶಂಕಿತರ ಮನೆ ಆವರಣಗಳನ್ನು ಶೋಧಿಸಲಾಗಿದೆ. ಈ ಪ್ರಕರಣವು ಬಿಟ್‌ಕಾಯಿನ್ ವ್ಯಾಪಾರದ ಮೂಲಕ ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದಕ್ಕೆ ಸಂಬಂಧಿಸಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.
ಪಾಕಿಸ್ತಾನದಲ್ಲಿರುವ ಮಾಸ್ಟರ್‌ ಮೈಂಡ್‌ ಒಬ್ಬ ಪಾಕಿಸ್ತಾನಿ ಗುಪ್ತಚರ ಏಜೆನ್ಸಿಗಳ ಸಕ್ರಿಯ ಬೆಂಬಲದೊಂದಿಗೆ ಮತ್ತು ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ (ಗಳ) ಜೊತೆ ಶಾಮೀಲಾಗಿ ಜೆ-ಕೆ ನಲ್ಲಿರುವ ತನ್ನ ಏಜೆಂಟರಿಗೆ ಹಣಸಂದಾಯ ಮಾಡುತ್ತಿದ್ದಾನೆ ಎನ್ನಲಾಗಿದೆ.

ಜಾಹಿದಾ ಬಾನೋ, ಗುಲಾಮ್ ಮುಜತಾಬಾ ದೀದಾದ್, ತಮ್ಜೀದಾ ಬೇಗಂ (ಎಲ್ಲರೂ ಕುಪ್ವಾರ ಜಿಲ್ಲೆಯ ನಿವಾಸಿಗಳು), ಯಾಸಿರ್ ಅಹ್ಮದ್ ಮಿರ್, ಮೊಹಮ್ಮದ್ ಸಯೀದ್ ಮಸೂದಿ (ಇಬ್ಬರೂ ಬಾರಾಮುಲ್ಲಾ ನಿವಾಸಿಗಳು), ಫಾರೂಕ್ ಅಹ್ಮದ್ ಮತ್ತು ಇಮ್ರಾನ್ ಚೌಧರಿ (ಪೂನ್‌ಚ್ ನಿವಾಸಿಗಳು) ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಶೋಧದ ವೇಳೆ, ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್‌ಗಳು, ಮೊಬೈಲ್ ಫೋನ್‌ಗಳು ಮತ್ತು ತನಿಖೆಯ ಮೇಲೆ ಪ್ರಭಾವ ಬೀರುವ ದಾಖಲೆಗಳಲ್ಲಿ ಅಡಗಿಸಿಟ್ಟಿರುವ ಆರೋಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈನ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!