ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರ ಸಂರಕ್ಷಣೆಗೆ ತನ್ನ ಜೀವನವನ್ನೇ ಅರ್ಪಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇಂದು ಪಂಚ ಭೂತಗಳಲ್ಲಿ ಲೀನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಿನ್ನೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದರು.
ಬೆಂಗಳೂರಿನ ಜ್ಞಾನ ಭಾರತೀ ಕಲಾಗ್ರಾಮದಲ್ಲಿ ಇಂದು ಅಂತಿಮ ನಮನ ಸಲ್ಲಿಸಿದ ಬಳಿಕ, ಡಾ. ಸಿದ್ದಲಿಂಗಯ್ಯ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಿಮ್ಮಕ್ಕ ಅವರಿಗೆ ಸರ್ಕಾರಿ ಗೌರವ ನೀಡಲಾಗಿದ್ದು, ಕುಶಾಲ ತೋಪು ಸಿಡಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅವರ ದತ್ತು ಪುತ್ರ ಅಂತ್ಯಕ್ರಿಯೆ ವಿಧಿಗಳನ್ನು ನೆರವೇರಿಸಿದರು.

