ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮಿನಿ ಹರಾಜು ಸಮೀಪಿಸುತ್ತಿರುವಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕುತೂಹಲ ಹೆಚ್ಚಿದೆ. ತಂಡ ಈಗಾಗಲೇ ತನ್ನ ಭವಿಷ್ಯ ಯೋಜನೆಗಳಿಗೆ ಹೊಸ ಮುಖ ನೀಡಿ ಹಲವು ಬದಲಾವಣೆಗಳನ್ನು ಕೈಗೊಂಡಿದೆ. ನಾಯಕತ್ವದಿಂದ ಹಿಡಿದು ವೇಗ ದಾಳಿವರೆಗೆ, ಸಿಎಸ್‌ಕೆ ತಂತ್ರಜ್ಞಾನದ ದಿಕ್ಕೇ ಹೊಸದಾಗಿ ಶುರುಮಾಡುತ್ತಿರುವಂತೆ ಕಾಣುತ್ತಿದೆ.
ಫ್ರಾಂಚೈಸಿಯ ಮೊದಲ ದೊಡ್ಡ ಹೆಜ್ಜೆ ಎಂದರೆ, ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ವಹಿವಾಟಿನಲ್ಲಿ ನೀಡಿ ರಾಜಸ್ಥಾನ್ ರಾಯಲ್ಸ್‌ನಿಂದ ಸಂಜು ಸ್ಯಾಮ್ಸನ್ ಅವರನ್ನು ಪಡೆದುಕೊಂಡಿರುವುದು. ಈ ಬದಲಾವಣೆ ಜತೆಗೆ ತಂಡದ ಬ್ಯಾಟಿಂಗ್ ಕ್ರಮ ಮತ್ತು ನಾಯಕತ್ವದ ಶಕ್ತಿಯಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇದಕ್ಕೂ ಮೀರಿ, ಲಂಕಾ ವೇಗಿ ಮತೀಶ ಪತಿರಾಣ ಅವರನ್ನು ಬಿಡುಗಡೆ ಮಾಡಲು ಸಿಎಸ್‌ಕೆ ತೀರ್ಮಾನಿಸಿದೆ. ಕಳೆದ ಸೀಸನ್‌ನಲ್ಲಿ ಅಲ್ಪ ಪ್ರದರ್ಶನ ಮತ್ತು ನಿರಂತರ ಫಿಟ್‌ನೆಸ್ ಸಮಸ್ಯೆಗಳು ಈ ನಿರ್ಧಾರದ ಹಿನ್ನೆಲೆಯಾಗಿದೆ. ಪತಿರಾಣ ರಿಲೀಸ್ ಆಗುವುದರಿಂದ ತಂಡದ ಪರ್ಸ್‌ಗೆ 13 ಕೋಟಿ ರೂ. ಹೆಚ್ಚುವರಿ ಮೊತ್ತ ಸೇರುವುದರಿಂದ ಹರಾಜಿನಲ್ಲಿ ಹೊಸ ವೇಗಿಯನ್ನು ಪಡೆಯಲು ಅವಕಾಶ ಹೆಚ್ಚಿದೆ.
ಅದೇ ರೀತಿ, ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರರನ್ನೂ ತಂಡದಿಂದ ಬಿಡುಗಡೆ ಮಾಡಲು ಸಿಎಸ್‌ಕೆ ಮುಂದಾಗಿದೆ. ಮೂರು ವಿದೇಶಿ ಆಟಗಾರರಿಗೆ ವಿದಾಯ ಹೇಳಿರುವ ಸಿಎಸ್‌ಕೆ, 2026ರ ಸೀಸನ್‌ಗೆ ಸಂಪೂರ್ಣ ಹೊಸ ಶಕ್ತಿ ಮತ್ತು ಹೊಸ ತಂತ್ರದೊಂದಿಗೆ ಮೈದಾನಕ್ಕಿಳಿಯಲು ಸಿದ್ಧತೆ ನಡೆಸಿದೆ.

