ಹೊಸದಿಗಂತ ವರದಿ ವಿಜಯಪುರ:
ನಿರಂತರ ಮಳೆಯಿಂದ ಹಳ್ಳದ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಗರಸಂಗಿ ಹಳ್ಳದ ಬಳಿ ನಡೆದಿದೆ. ನಂದಪ್ಪ ಸಂಗಪ್ಪ ಸೊನ್ನದ (65) ಮೃತ ದುರ್ದೈವಿ.
ನಂದಪ್ಪ ಸೊನ್ನದ ತನ್ನ ಜಮೀನಿನ ಪಕ್ಕದ ಹಳ್ಳದ ದಂಡೆಯಲ್ಲಿ ಶನಿವಾರ ಸಂಜೆ ಎಮ್ಮೆಗಳನ್ನು ಮೇಯಿಸುವ ಸಂದರ್ಭದಲ್ಲಿ ರೋಣಿಹಾಳ ಮತ್ತು ಗರಸಂಗಿ ಗ್ರಾಮಗಳ ಕೆರೆಗಳಲ್ಲಿ ವ್ಯಾಪಕ ಮಳೆಯಾದ ಪರಿಣಾಮ, ಕೆರೆಗಳು ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಗರಸಂಗಿ ಹಳ್ಳದಲ್ಲಿ ಹರಿಯುತ್ತಿವೆ. ಮೇಯುತ್ತಿದ್ದ ಮೂರು ಎಮ್ಮೆಗಳು ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ, ಅವುಗಳನ್ನು ರಕ್ಷಿಸಲು ಹೋಗಿ ಈತ ಸಹ ನೀರು ಪಾಲಾಗಿದ್ದಾನೆ.
ಎರಡು ಎಮ್ಮೆಗಳು ಪಕ್ಕದಲ್ಲಿರುವ ಗಿಡಗಂಟಿಗಳಿಗೆ ತಗುಲಿ ಬಚಾವ್ ಆಗಿವೆ. ಆದರೆ ಈತನ ಜೊತೆಗೆ ಎಮ್ಮೆಯೊಂದು ಕೂಡ ಕೊಚ್ಚಿಕೊಂಡು ಹೋಗಿ ಸಾವಿಗೀಡಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರೇಮಸಿಂಗ್ ಪವಾರ, ಕೊಲ್ಹಾರ ಪಿಎಸ್ಐಗಳಾದ ಪ್ರೀತಮ್ ನಾಯಕ್ ಹಾಗೂ ಎನ್. ಜಿ. ಬಿರಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.