ಹೊಸದಿಗಂತ ವರದಿ, ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಿರುನಾಣಿ- ಹುದಿಕೇರಿ (ಪೊರಾಡ್-ಹೈಸೊಡ್ಲೂರು) ರಸ್ತೆಯ ಒಂದು ಬದಿ ಕುಸಿದಿದ್ದು, ರಸ್ತೆ ಸಂಪರ್ಕ ಕಡಿದುಕೊಳ್ಳುವ ಅಪಾಯ ಎದುರಾಗಿದೆ.
ಪೊನ್ನಂಪೇಟೆ ಮತ್ತು ಗೋಣಿಕೊಪ್ಪದಿಂದ ಬಿರುನಾಣಿಗೆ ಸುಮಾರು 10-12 ಕಿ.ಮೀ. ಅಂತರ ಕಡಿಮೆಯಾಗುವ,ಹಾಗೂ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನಕ್ಕೆ ಸಮೀಪದ ಮಾರ್ಗ(ಪೊರಾಡ್-ಹೈ ಸೊಡ್ಲೂರ್ ಮೂಲಕ) ವಾಗಿರುವ ಈ ರಸ್ತೆ, ಕಕ್ಕಟ್ಟ್ ಪೊಳೆ ನದಿಯ ಸೇತುವೆ ಸಮೀಪ ಉಂಟಾಗಿರುವ ಭೂಕುಸಿತದಿಂದಾಗಿ ಅಪಾಯ ಎದುರಾಗುವ ಸಂಭವವಿದೆ.
ತೋಡಿನ ನೀರು ಹರಿದು ಸುಮಾರು 30 ಅಡಿ ಅಳದಿಂದ ನದಿಯ ಮಟ್ಟದಲ್ಲಿ ಮಣ್ಣು ಕೊಚ್ಚಿಹೋಗಿ ಮಣ್ಣು ಜಾರುತ್ತಿದೆ.ಕಳೆದ 3-4ವರ್ಷಗಳಿಂದ ಇಲ್ಲಿ ಮಣ್ಣು ಜಾರಿ ಅಪಾಯ ಉಂಟಾಗಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದ ಹಿನ್ನಲೆಯಲ್ಲಿ ಇದೀಗ ಮುಖ್ಯ ರಸ್ತೆಯೇ ಕಡಿತವಾಗುವ ಅಪಾಯ ಉಂಟಾಗಿದೆ.
ಭೂಕುಸಿತದಿಂದ 30 ಅಡಿಯಷ್ಟು ಕಂದಕ ನಿರ್ಮಾಣವಾಗಿದ್ದು, 20 ಅಡಿ ಅಂತರದಲ್ಲಿರುವ ಮನೆಯಲ್ಲಿ ಮಾಜಿ ಸೈನಿಕ ಕುಟುಂಬವೊಂದು ಜೀವವನ್ನು ಕೈಯ್ಯಲ್ಲಿ ಹಿಡಿದು ಮನೆಯಲ್ಲಿ ವಾಸವಿದೆ.
ಇದೇ ರೀತಿ ಇನ್ನೂ ಹಲವು ದಿನ ಮಳೆ ಸುರಿದರೆ, ಒಂದು ಕಡೆ ಮನೆ ಇನ್ನೊಂದು ಕಡೆ ಮುಖ್ಯ ರಸ್ತೆ ಕುಸಿದು ಸಂಪರ್ಕ ಕಡಿತವಾಗುವ ಅಪಾಯ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣೀರ ಹರೀಶ್ ಮಾದಪ್ಪ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಮಳೆ ಹಾನಿ ತುರ್ತು ಪರಿಹಾರ ತಂಡ ಇಲ್ಲಿಗೆ ಭೇಟಿ ನೀಡಿ, ಮತ್ತಷ್ಟು ಅಪಾಯವಾಗದಂತೆ ತುರ್ತಾಗಿ ಮತ್ತು ಮುಂದೆ ಶಾಶ್ವತವಾಗಿ ಕುಸಿಯದಂತೆ ಸೂಕ್ತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ