ಹೆಚ್ಡಿಕೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರಸ್ಸಿಗರಿಗೆ ಇಲ್ಲ : ಕೆ.ಎಂ.ಗಣೇಶ್

ಹೊಸದಿಗಂತ ವರದಿ, ಮಡಿಕೇರಿ:
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಏನು ಮಾಡಿದ್ದಾರೆಂಬುದು ರಾಜ್ಯದ ಜನತೆಗೆ ತಿಳಿದಿದ್ದು, ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರು ಏನು ಮಾಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಇಲ್ಲ ಎಂದು ಟೀಕಿಸಿದರು.
ಲಾಟರಿ ಹಾಗೂ ಸಾರಾಯಿ ನಿಷೇಧಿಸಿ ಎಷ್ಟೋ ಜನ ಕಾರ್ಮಿಕರ ಜೀವನ ಉದ್ಧಾರ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. 2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಜೆಂಡಾದಂತೆ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ಕೊಡಗಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ತಿಳಿದಿದೆ ಅವರ ಬಗ್ಗೆ ಮಾತನಾಡುವಾಗ ಲಕ್ಷ್ಮಣ್ ಎಚ್ಚರಿಕೆಯಿಂದ ಮಾತನಾಡಲಿ. ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಅವರ ವಿರುದ್ಧ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಗಲು ಕಾಂಗ್ರೆಸ್, ರಾತ್ರಿ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಳ್ಳುವ ಕಾಂಗ್ರೆಸ್ ನಿಜವಾಗಿಯೂ ಬಿಜೆಪಿಯ ಬಿ ಟೀಮ್ ಎಂದ ಗಣೇಶ್, ಮೊದಲು ತಮ್ಮಲ್ಲಿರುವ ಒಡಕನ್ನು ಸರಿದೂಗಿಸುವ ಕೆಲಸ ಮಾಡಲಿ, ತಾಕತ್ತು ಇದ್ದರೆ ತಮ್ಮ ನಾಯಕರು ಯಾರೆಂದು ಹೇಳಿಕೊಳ್ಳಲಿ ಎಂದು ಸವಾಲು ಹಾಕಿದರು.
ಅಂದು ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಬೇರೆ, ಪ್ರಸ್ತುತ ದೇಶದಲ್ಲಿರುವ ಕಾಂಗ್ರೆಸ್ ಬೇರೆ. ಜೆಡಿಎಸ್ ನಾಯಕರನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಕಾಂಗ್ರೆಸ್‍ನಲ್ಲಿ ಇರುವ ನಾಯಕರು ಯಾರು ಎಂದು ತಿಳಿದುಕೊಳ್ಳಲಿ ಎಂದ ಅವರು, ಜೆಡಿಎಸ್’ನಿಂದ ಕಾಂಗ್ರೆಸ್‍ಗೆ ಶಾಸಕರು ಬರಲಿದ್ದಾರೆ ಎಂದು ಸುಳ್ಳು ಹೇಳುವ ಬದಲು ಶಾಸಕರ ಹೆಸರನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಎಂ.ಶರೀಫ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್, ಉಪಾಧ್ಯಕ್ಷ ಪಂದ್ಯಂಡ ರವಿ ಮಾದಪ್ಪ, ಮಹಿಳಾ ವಕ್ತಾರರಾದ ಗುಲಾಬಿ ಜನಾರ್ಧನ್, ಜಿಲ್ಲಾಧ್ಯಕ್ಷೆ ಪುಷ್ಪಾವತಿ ರಮೇಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!