ವಿಶ್ವಕಪ್‌ ಮೇಲೆ ಕಣ್ಣಿಟ್ಟ ರೋಹಿತ್‌ ಪಡೆಗೆ ಆಘಾತ; ಟಿ20 ವಿಶ್ವಕಪ್‌ಗೆ ವೇಗಿ ಬುಮ್ರಾ ಅನುಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಟೀಂ ಇಂಡಿಯಾಕ್ಕೆ ಇತ್ತೀಚಿನ ದಿನಗಳಲ್ಲಿ ಆಟಗಾರರ ಇಂಜ್ಯೂರಿ ಸಮಸ್ಯೆಯಾಗಿ ಕಾಡುತ್ತಿದೆ. ಸ್ಟಾರ್‌ ಪ್ಲೆಯರ್‌ ಗಳು ಗಾಯದ ಕಾರಣದಿಂದ ಒಂದಾದ ಮೇಲೊಂದರಂತೆ ಸರಣಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಬೌಲಿಂಗ್‌ ವಿಭಾಗದಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಯುವ ವೇಗಿ ದೀಪಕ್‌ ಚಾಹರ್‌ ಗಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ, ಹರ್ಷಲ್ ಪಟೇಲ್ ಹಾಗೂ  ವಾಷಿಂಗ್ಟನ್ ಸುಂದರ್ ಸಹ ಗಾಯಕ್ಕೆ ತುತ್ತಾಗಿದ್ದಾರೆ. ಇದೀಗ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಬೆನ್ನುನೋವಿನಿಂದಾಗಿ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದ ತಂಡದ ಸ್ಟಾರ್‌ ಬೌಲರ್ ಜಸ್ಪ್ರೀತ್ ಬುಮ್ರಾ ಟಿ.20 ವಿಶ್ವಕಪ್‌ ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ವೇಳೆಗೆ ಬುಮ್ರಾ ಗಾಯದಿಂದ ಸಂಪೂರ್ಣ ಗುಣಮುಖರಾಗಿ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯೊಂದು ತಿಳಿಸಿದೆ. ಇನ್‌ಸೈಡ್‌ಸ್ಪೋರ್ಟ್‌ನೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಬೆನ್ನುನೋವಿನ ಸಮಸ್ಯೆಗೆ ಒಳಗಾಗಿರುವ ವೇಗಿಯ ಗಾಯವನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. “ಬೂಮ್ರಾ ಸಧ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ)ಗೆ ಮರಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬೂಮ್ರಾಗೆ ಬೆನ್ನುನೋವು ಮರುಕಳಿಸಿದೆ. ಇದು ಹಳೆಯ ಗಾಯವಾಗಿದ್ದು ಮತ್ತೆ ಮರುಕಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ICC T20 ವಿಶ್ವಕಪ್ ಗೆ ಕೇವಲ ಎರಡು ತಿಂಗಳುಗಳು ಉಳಿದಿವೆ. ಅವರು ಅತ್ಯಂತ ಕೆಟ್ಟ ಸಮಯದಲ್ಲಿ ಗಾಯಗೊಂಡಿದ್ದಾರೆ. ನಾವು ಅವರ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಅವರು ಟಿ.20 ವಿಶ್ವಕಪ್‌ ನಲ್ಲಿ ಪಾಲ್ಗೊಳ್ಳುವ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಬುಮ್ರಾ ಪ್ರಸ್ತುತ ಮೂರೂ ಕ್ರಿಕೆಟ್‌ ಮಾದರಿಗಳಲ್ಲಿ ಭಾರತದ ಅತ್ಯುತ್ತಮ ಬೌಲರ್ ಆಗಿದ್ದಾರೆ. ಅವರು ಗಾಯದ ಕಾರಣದಿಂದ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಗಳಿಂದ ವಿಶ್ರಾಂತಿ ಪಡೆದಿದ್ದರು. ಆದರೆ ದುರದೃಷ್ಟವಶಾತ್‌ ಗಾಯ ಗಂಭೀರ ಸ್ವರೂಪದ್ದಾದ್ದರಿಂದ ಏಷ್ಯಾಕಪ್ ನಲ್ಲೂ ಅವರ ಪುನರಾಗಮನ ಸಾಧ್ಯವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!