ಹೊಸದಿಗಂತ ಡಿಜಿಟಲ್ ಡೆಸ್ಕ್
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಕುಸ್ತಿಪಟು ದಿವ್ಯ ಕಾಕ್ರನ್ ಕಂಚಿನ ಪದಕ ಗೆದ್ದ ಸಂಭ್ರಮದ ನಡುವೆಯೇ ತನಗೆ ದೆಹಲಿ ಆಪ್ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಬಹಿರಂಗಪಡಿಸಿ ನೋವು ತೋಡಿಕೊಂಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಆಪ್ ಶಾಸಕ ಸೌರಭ್ ಭಾರದ್ವಾಜ್, ʼಆಕೆ ಯಾವಾಗ ದೆಹಲಿ ರಾಜ್ಯವನ್ನು ಪ್ರತಿನಿಧಿಸಿದ್ದರುʼ ಎಂದು ಪ್ರಶ್ನಿಸುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಶಾಸಕನಿಗೆ ತಾನು ತಾನು ದೆಹಲಿಯನ್ನು ಪ್ರತಿನಿಧಿಸಿದ ಸರ್ಟಿಫಿಕೇಟ್ ತೋರಿಸುವ ಮೂಲಕ ದಿವ್ಯಾ ತಿರುಗೇಟು ನೀಡಿದ್ದರು. ಈ ವಿವಾದ ಈಗ ಮತ್ತಷ್ಟು ವಾದ- ವಿವಾದಗಳಿಗೆ ಗ್ರಾಸವಾಗಿದ್ದು ದೆಹಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಆಪ್ ನಾಯಕರು ನೀಡಿದ್ದ ಹೇಳಿಕೆಗಳೇ ಆಪ್‌ಗೆ ತಿರುಗುಬಾಣವಾಗಿ ಸುತ್ತಿಕೊಳ್ಳುತ್ತಿದೆ.
ಕಳೆದ 20 ವರ್ಷಗಳಿಂದ ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ದೆಹಲಿಗೆ ಪದಕಗಳನ್ನು ಗೆದ್ದುಕೊಟ್ಟಿದ್ದೇನೆ. ಆದರೆ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ತನಗೆ ಹಣ ಅಥವಾ ಯಾವುದೇ ರೀತಿಯ ಸಹಾಯ ನೀಡಿಲ್ಲ ಎಂದು ದಿವ್ಯಾ ಕೆಲ ದಿನಗಳ ಹಿಂದೆ ನೋವು ತೋಡಿಕೊಂಡಿದ್ದರು. ಈ ಹೇಳಿಕೆ ಆಪ್ ಶಾಸಕರನ್ನು ಕೆರಳಿಸಿತ್ತು. ಎಎಪಿ ಶಾಸಕ ಸೌರಭ್ ಭಾರದ್ವಾಜ್, ನಾವು ದಿವ್ಯಾ ಸಾಧನೆಯನ್ನು ಗೌರವಿಸುತ್ತೇವೆ. ಆದರೆ ಆಕೆ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರಿಂದ ನಗದು ಬಹುಮಾನ ನೀಡಲು ಸಾಧ್ಯವಿಲ್ಲ. ಯೋಗಿ ಆದಿತ್ಯನಾಥ್ ಅವರಿಂದ ನೀವು ಗೌರವವನ್ನು ನಿರೀಕ್ಷಿಸುವುದಿಲ್ಲ. ದೆಹಲಿಯ ಮುಖ್ಯಮಂತ್ರಿ ಅವರಿಂದ ಮಾತ್ರವೇ ನೆರವು ಅಪೇಕ್ಷಿಸುತ್ತೀರಿ ಎಂದಿದ್ದರು.
ಉತ್ತರ ಪ್ರದೇಶದ ಬಿಜೆಪಿ ನಾಯಕರು ದಿವ್ಯಾ ಕಕ್ರಾನ್ ಅವರನ್ನು ಅಭಿನಂದಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದ ಇನ್ನೊಬ್ಬ ಶಾಸಕ ನರೇಶ್ ಬಲ್ಯಾನ್, ಕಾಮನ್ ವೆಲ್ತ್ ಪದಕ ವಿಜೇತೆ ದಿವ್ಯಾ ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಮೂಲೆಗುಂಪು ಮಾಡಿ ಹೇಳಿಕೆ ನೀಡಲು ಇದು ಒಂದು ಕಾರಣ ಎಂದು ವಾಗ್ದಾಳಿ ನಡೆಸಿದ್ದರು. ಪ್ರಕರಣವನ್ನು ರಾಜಕೀಯಗೊಳಿಸಿದ್ದಕ್ಕಾಗಿ ಎಎಪಿ ಸರ್ಕಾರ ವಿರುದ್ಧ ಎಲ್ಲೆಡೆಯಿಂದ ಟೀಕೆಗಳು ಕೇಳಿಬರುತ್ತಿರುವ ನಡುವೆ ಮತ್ತೆ ಪ್ರತಿಕ್ರಿಯಿಸಿರುವ ದಿವ್ಯಾ, 2017 ರಲ್ಲಿ ತಾನು ದೆಹಲಿಗಾಗಿ ಆಡಿ 58 ಪದಕಗಳನ್ನು ಗಳಿಸಿಕೊಟ್ಟರೂ ದೆಹಲಿ ಸರ್ಕಾರ ತನಗೆ ಯಾವುದೇ ಹಣಕಾಸಿನ ನೆರವು ನೀಡಿರಲಿಲ್ಲ. ನಾನು 2017 ರಲ್ಲಿ ಏಷ್ಯಾದಲ್ಲಿ ಪದಕ ಗೆದ್ದ ನಂತರ ಸಿಎಂ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ, ನಾನು ಅವರಿಗೆ ಲಿಖಿತ ಪತ್ರವನ್ನು ನೀಡಿದರೆ, ನನಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕವೂ ನೆರವು ಸಿಗದಿದ್ದರಿಂದ 2018 ರಿಂದ ಉತ್ತರ ಪ್ರದೇಶಕ್ಕಾಗಿ ಆಡುವ ಅನಿವಾರ್ಯತೆ ನಿರ್ಮಾಣವಾಯಿತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಮೊದಲು ಕ್ರೀಡಾಪಟುಗಳನ್ನು ಗೌರವಿಸಿ. ಅವರು ಯಾವುದೇ ಪಕ್ಷದವರಾಗಿರಲಿ ಅಥವಾ ಯಾವುದೇ ರಾಜ್ಯದವರಾಗಿರಲಿ, ಅದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಂದಿರುವ ಆಕೆ ಎಎಪಿ ಸರ್ಕಾರಕ್ಕೆ ಖಾರವಾಗಿ ತಿರುಗೇಟು ನೀಡಿದ್ದಾರೆ.
ಆಪ್ ಸರ್ಕಾರದ ಇಬ್ಬಗೆಯ ನೀತಿ:
ʼಇತರ ರಾಜ್ಯಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಬಹುಮಾನ ನೀಡಲು ಸಾಧ್ಯವಿಲ್ಲ ಎಂದು ಎಎಪಿ ಶಾಕನ ಹೇಳುತ್ತಾರೆ. ಆದರೆ ದೆಹಲಿಯ ಎಎಪಿ ಸರ್ಕಾರ ಹರಿಯಾಣ ರಾಜ್ಯವನ್ನು ಪ್ರತಿನಿಧಿಸುವ ಬಜರಂಗ್ ಪೂನಿಯಾ, ರವಿ ದಹಿಯಾ ಅವರಿಗೆ ನಗದು ಬಹುಮಾನ ನೀಡಿದ ವಿಚಾರ ಈಗ ಚರ್ಗ್ರಾಚೆಯ ಮುನ್ನೆಲೆಗೆ ಬಂದಿದೆ.
ಬಜರಂಗ್ ಪೂನಿಯಾಗೆ ಆಪ್ 1 ಕೋಟಿ ಬಹುಮಾನ ನೀಡಿದ್ದರೆ, ಟೋಕಿಯೊ ಒಲಿಂಪಿಕ್ ಸ್ಟಾರ್ ರವಿ ದಹಿಯಾ ಅವರಿಗೆ 2 ಕೋಟಿ ರೂಪಾಯಿ ‘ಸಮ್ಮಾನ್ ರಾಶಿ’ ಪುರಸ್ಕಾರ ನೀಡಿತ್ತು. ಜೊತೆಗೆ ಅವರನ್ನು ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರನ್ನಾಗಿ ನೇಮಿಸಿತು. ಪುನಿಯಾ ಅವರಂತೆ, ದಹಿಯಾ ಕೂಡ ಹರಿಯಾಣವನ್ನು ಪ್ರತಿನಿಧಿಸುತ್ತಾರೆ ಮತ್ತು ದೆಹಲಿಯ ಪರವಾಗಿ ಇದುವರೆಗೆ ಆಡಿಲ್ಲ. ದಿವ್ಯಾ ಕಾಕ್ರಾನ್ ವಿಚಾರದಲ್ಲಿ ಆಪ್ ಸರ್ಕಾರದ ಇಬ್ಬಗೆಯ ನೀತಿಗೆ ಕಾರಣವೇನು? ಆಕೆ ಉತ್ತರ ಪ್ರದೇಶ ಮೂದವಳು ಎಂಬ ಕಾರಣಕ್ಕೆ ಆಪ್ ರಾಜಕೀಯ ಮಾಡುತ್ತಿದೆಯೇ, ಇಲ್ಲವೇ ಯುಪಿ ಸರ್ಕಾರ ತನಗೆ ನೆರವು ನೀಡಿತ್ತು ಎಂಬ ಆಕೆಯ ಹೇಳಿಕೆ ಆಪ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ದೇಶಕ್ಕೆ ಕಂಚು ಗೆದ್ದುಕೊಟ್ಟ ಸಾಧಕಿಗೆ ಯಾವುದೇ ನೆರವು ನೀಡದೆ, ಆಕೆಯ ಹೇಳಿಕೆಗಳಿಗೆ ರಾಜಕೀಯ ನೆಲೆಗಟ್ಟಿನಲ್ಲಿ ಉತ್ತರಿಸುತ್ತಿರುವ ಆಮ್ ಆದ್ಮಿ ನಾಯಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.