ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ಮತ್ತು ಎನ್ಟಿಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹುಟ್ಟೂರು ಅನಂತಪುರ ಜಿಲ್ಲೆಯ ಮಡಕಶಿರಾ ಕ್ಷೇತ್ರದ ನೀಲಕಂಠಪುರ. ಅವರ ತಾತ, ಅಪ್ಪಂದಿರೆಲ್ಲ ಇಲ್ಲೇ ವಾಸವಾಗಿದ್ದರು. ಹಿರಿಯ ಕಾಂಗ್ರೆಸ್ ನಾಯಕ ರಘುವೀರ್ ರೆಡ್ಡಿ ಪ್ರಶಾಂತ್ ನೀಲ್ ಚಿಕ್ಕಪ್ಪ. ಪ್ರಶಾಂತ್ ನೀಲ್ ಆಗಾಗ ತನ್ನ ಊರಿಗೆ ಬಂದು ಹೋಗುತ್ತಿರುತ್ತಾರೆ. ಈ ಬಾರಿ ಅಲ್ಲಿನ ಆಸ್ಪತ್ರೆಗೆ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಪ್ರಶಾಂತ್ ನೀಲ್ ಅವರ ತಂದೆ ಸುಭಾಷ್ ರೆಡ್ಡಿ ಅವರು ಕೆಲವು ತಿಂಗಳ ಹಿಂದೆ ನಿಧನರಾದರು, ಅವರ ಸಮಾಧಿಯನ್ನು ನೀಲಕಂಠಪುರಂನಲ್ಲೇ ನಿರ್ಮಿಸಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ತಂದೆಯ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಹುಟ್ಟೂರಿಗೆ ಆಗಮಿಸಿ ಅಲ್ಲಿನ ದೇವಸ್ಥಾನಕ್ಕೂ ಭೇಟಿ ನೀಡಿದರು.
ಬಳಿಕ ನೀಲಕಂಠಪುರಂನಲ್ಲಿರುವ ಎಲ್.ವಿ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿ ತಂದೆಯ ನೆನಪಿಗಾಗಿ 50 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಪ್ರಶಾಂತ್ ನೀಲ್ ಘೋಷಿಸಿದ್ದಾರೆ. ಇದರಿಂದ ನೀಲಕಂಠಪುರದ ನಿವಾಸಿಗಳು ಸಂತಸಗೊಂಡಿದ್ದಾರೆ. ಆ ಹಳ್ಳಿಯ ಜನರ ಜೊತೆಗೆ ನೆಟ್ಟಿಗರು, ಪ್ರೇಕ್ಷಕರು ಕೂಡ ಪ್ರಶಾಂತ್ ನೀಲ್ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.