ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ ಜಗತ್ತು ಭವಿಷ್ಯದ ಯುದ್ಧಕ್ಕೆ ಸಜ್ಜಾಗುತ್ತಿದ್ದು ಜಗತ್ತಿನ ಪ್ರಬಲ ರಾಷ್ಟ್ರಗಳು ಅದಾಗಲೇ ನಾಲ್ಕನೇ ತಲೆಮಾರಿನಿಂದ ತಮ್ಮ ಸೈನ್ಯವನ್ನು ಆಧುನಿಕರಣಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತದಲ್ಲೂ ಪ್ರಯತ್ನಗಳಾಗುತ್ತಿದ್ದು ಸ್ವಾತಂತ್ರ್ಯೋತ್ಸವದ ಬೆನ್ನಲ್ಲೇ ಅತ್ಯಾಧುನಿಕ ಆಯುಧಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನೆಗೆ ಹಸ್ತಾಂತರಿಸಿದ್ದಾರೆ.
F-INSAS ಸಿಸ್ಟಮ್, ನಿಪುಣ್ ಮೈನ್ಸ್ ಹಾಗೂ ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ ಹೆಸರಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದು ಇವುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಿರೋ ಮಾಹಿತಿ ಇಲ್ಲಿದೆ.
F-INSAS ಸಿಸ್ಟಮ್:
ಫ್ಯೂಚರ್ ಇನ್‌ಫ್ಯಾಂಟ್ರಿ ಸೋಲ್ಜರ್ ಆಸ್ ಎ ಸಿಸ್ಟಮ್ ಅನ್ನೋ ಹೆಸರಿನ ಈ ವ್ಯವಸ್ಥೆಯು ಸೈನ್ಯದ ಆಧುನೀಕರಣದ ಭಾಗವಾಗಿದ್ದು ಪದಾತಿ ಸೈನಿಕನಿಗೆ ಹೆಚ್ಚಿನ ಸಾಮರ್ಥ್ಯವನ್ನು ಕೊಡುವ ಗುರಿ ಹೊಂದಿದೆ. ಹಗುರವಾದ ಹಾಗೇ ಎಲ್ಲಾ ಹವಾಮಾನಕ್ಕೂ ಹೊಂದಿಕೆಯಾಗಬಲ್ಲ ಉಡುಪು ಹಾಗೂ ಆಯುಧಗಳನ್ನು ಈ ವ್ಯವಸ್ಥೆ ಹೊಂದಿದೆ. ಜೊತೆಗೆ ಕಡಿಮೆ ವೆಚ್ಚ ಹಾಗೂ ನಿರ್ವಹಣೆ ಈದರ ವಿಶಿಷ್ಟತೆಗಳಲ್ಲೊಂದು.
ಇದು AK-203 ಆಕ್ರಮಣಕಾರಿ ರೈಫಲ್ ಅನ್ನು ಒಳಗೊಂಡಿದೆ. ಈ ಆಯುಧವು ರಷ್ಯಾ ಮೂಲದ್ದಾಗಿದ್ದು ಅಮೇಠಿಯಲ್ಲಿರೋ ರಷ್ಯಾ-ಭಾರತ ಜಂಟಿ ಉದ್ಯಮದಲ್ಲಿ ತಯಾರಿಸಲಾಗುತ್ತದೆ.
ಇದರ ಹೊರತಾಗಿ ಸೈನಿಕರಿಗೆ ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳು, ಬ್ಯಾಲಿಸ್ಟಿಕ್ ಕನ್ನಡಕಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸುತ್ತದೆ. ಇವು ಎಕೆ-47 ರೈಫಲ್‌ಗಳಿಂದ 9 ಎಂಎಂ ಮದ್ದುಗುಂಡುಗಳಿಂದ ಸೈನಿಕನನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ ಹೋಲೋಗ್ರಾಮ್ ದೃಷ್ಟಿ ಹಾಗೂ ರಾತ್ರಿ ದೃಷ್ಟಿ ಸಾಧನವನ್ನು ಕೂಡಾ ಒಳಗೊಂಡಿದೆ.
ನಿಪುಣ್ ಮೈನ್ಸ್:
ಇದು ಲ್ಯಾಂಡ್ ಮೈನ್ ಥರಹವೇ ಕಾರ್ಯ ನಿರ್ವಹಿಸುವ ಆಯುಧವಾಗಿದ್ದು ಶತ್ರುಗಳನ್ನು ಮುಂದೆ ಬರದಂತೆ ತಡೆಯಲು ಬಳಕೆಯಾಗುತ್ತದೆ. ಇವುಗಳು ಗಾತ್ರದಲ್ಲಿ ಚಿಕ್ಕದಿದ್ದು ಸಾಗಾಟ ಇತ್ಯಾದಿಗಳಿಗೆ ಕೂಡ ಹೆಚ್ಚು ಅನುಕೂಲಕರವಾಗಿದೆ. ಇವುಗಳನ್ನು ಮನುಷ್ಯರ ವಿರುದ್ಧ ಅಥವಾ ಭಾರೀ ವಾಹನಗಳನ್ನು ಗುರಿಯಾಗಿಸಿಕೊಂಡು ಅಥವಾ ಟ್ಯಾಂಕ್ ಗಳು ಆಕ್ರಮಣ ಮಾಡುವ ಸಂದರ್ಭದಲ್ಲೂ ಬಳಸನಹುದಾಗಿದೆ.
ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್:
ಇದು ದೋಣಿಗಳ ಬದಲಿಯಾಗಿ ಬಳಸಬಹುದಾದ ವ್ಯವಸ್ಥೆಯಾಗಿದೆ. ಪೂರ್ವ ಲಡಾಖ್‌ನಲ್ಲಿನ ನೀರಿನ ಅಡೆತಡೆಗಳನ್ನು ದಾಟಲು ಉತ್ತಮ ಉಡಾವಣೆ, ವೇಗ ಮತ್ತು ಸಾಮರ್ಥ್ಯವನ್ನು ಇದು ಹೊಂದಿದೆ.