ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕಗಳಲ್ಲೇ ಹಿಂದೆಂದೂ ಕಂಡಿರದ ಭೀಕರ ಬರಗಾಲಕ್ಕೆ ಯುರೋಪ್ ತುತ್ತಾಗಿದೆ. ಬಹುತೇಕ ನೀರಿನ ಮೂಲಗಳು ಖಾಲಿಯಾಗಿದ್ದು ನೀರಿನಡಿ ಮುಚ್ಚಿಹೋಗಿದ್ದ ಪಳೆಯುಳಿಕೆಗಳೆಲ್ಲ ಈಗ ಗೋಚರವಾಗುತ್ತಿದೆ.
ಸ್ಪೇನ್‌ನಲ್ಲಿ ಬಹಳ ಪುರಾತನವಾದ ಸ್ಟೋನ್ ಹೆಂಜ್ ಸ್ಮಾರಕವು ಈಗ ಕಾಣಿಸತೊಡಗಿದೆ. ಇದು ಅಣೆಕಟ್ಟಿನ ನೀರಿನಿಂದ ಆವರಿಸಲ್ಪಟ್ಟಿತ್ತು. ಅಧಿಕೃತವಾಗಿ ಗ್ವಾಡಾಲ್‌ಪೆರಲ್‌ನ ಡಾಲ್ಮೆನ್ ಎಂದು ಕರೆಯಲ್ಪಡುವ ಈ ಕಲ್ಲಿನ ವೃತ್ತವು ಪ್ರಸ್ತುತ ಕ್ಯಾಸೆರೆಸ್‌ನ ಮಧ್ಯ ಪ್ರಾಂತ್ಯದ ವಾಲ್ಡೆಕಾನಾಸ್ ಜಲಾಶಯದ ಒಂದು ಮೂಲೆಯಲ್ಲಿ ಸಂಪೂರ್ಣವಾಗಿ ತೆರೆದುಕೊಂಡಿದೆ, ಅಲ್ಲಿ ನೀರಿನ ಮಟ್ಟವು 28% ಕ್ಕೆ ಇಳಿದಿದೆ.
ಈ ಸ್ಮಾರಕವು 1963 ರಲ್ಲಿ ಫ್ರಾನ್ಸಿಸ್ಕೊ ಫ್ರಾಂಕೋ ಅವರ ಸರ್ವಾಧಿಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ಪ್ರವಾಹಕ್ಕೆ ಒಳಗಾಯಿತು. ಅಂದಿನಿಂದ ಇದು ಕೇವಲ ನಾಲ್ಕು ಬಾರಿ ಸಂಪೂರ್ಣವಾಗಿ ಗೋಚರಿಸಿದೆ.
ಇನ್ನೂ ಜರ್ಮನಿಯಲ್ಲಿಯೂ ಕೂಡ ನದಿಗಳು ಬತ್ತುತ್ತಿದ್ದು ಪ್ರಮುಖ ನದಿಯಾದ ರೈನ್ ನದಿಯ ಉದ್ದಕ್ಕೂ ಹಸಿವಿನ ಕಲ್ಲುಗಳು ಎಂದು ಕರೆಯಲ್ಪಡುವ ಕಲ್ಲುಗಳು ಗೋಚರಿಸುತ್ತಿವೆ. ಹಿಂದಿನ ಬರಗಾಲದಲ್ಲಿ ಗೋಚರವಾಗಿದ್ದ ಇವು ಈಗ ಮತ್ತೆ ಗೋಚರಿಸುತ್ತಿರುವುದು ಹಿಂದಿನ ಬರದ ನೆನಪು ಮಾಡುತ್ತಿದೆ ಎನ್ನಲಾಗಿದೆ.
ಯುರೋಪಿನ ಮತ್ತೊಂದು ಪ್ರಬಲ ನದಿಯಾದ ಡ್ಯಾನ್ಯೂಬ್, ಬರಗಾಲದ ಪರಿಣಾಮವಾಗಿ ಸುಮಾರು ಒಂದು ಶತಮಾನದಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ, ಸೆರ್ಬಿಯಾದ ನದಿ ಬಂದರು ಪಟ್ಟಣವಾದ ಪ್ರಹೋವೊ ಬಳಿ ಎರಡನೇ ಮಹಾಯುದ್ಧದ ಸಮಯದಲ್ಲಿ ಮುಳುಗಿದ 20 ಕ್ಕೂ ಹೆಚ್ಚು ಜರ್ಮನ್ ಯುದ್ಧನೌಕೆಗಳು ಈಗ ಪುನಃ ಹೊರಜಗತ್ತಿಗೆ ಕಾಣಿಸುತ್ತಿವೆ.
ಇನ್ನು ಇಟಲಿಯಲ್ಲಿಯೂ ಕೂಡ ವಿಶ್ವಯುದ್ಧದ ಪಳೆಯುಳಿಕೆಗಳು ಪತ್ತೆಯಾಗಿದ್ದು ಪೋ ನದಿಯ ಸುತ್ತಲಿನ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈ ಹಿಂದೆ ವಿಶ್ವಯುದ್ಧ ಸಂದರ್ಭದಲ್ಲಿ ಮುಳುಗಿದ್ದ 450 ಕೆಜಿ ತೂಕದ ಬಾಂಬ್ ಒಂದು ಪತ್ತೆಯಾಗಿದ್ದು ತಜ್ಞರ ಸಹಾಯದಿಂದ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ.