ಅನಿಂದಿತ್ ಗೌಡ ಕೊಚ್ಚಿ ಬಾರಿಕೆಯ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕ ಬಿಡುಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್ 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಯುವ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಗರದ ತುಳುಭವನದಲ್ಲಿ ಬುಧವಾರ ನಡೆಯಿತು.
1837ರಲ್ಲಿ ನಡೆದ ಐತಿಹಾಸಿಕ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕುರಿತು ಇಂಗ್ಲೆಂಡಿನ ವಸ್ತು ಸಂಗ್ರಹಾಲಯಗಳಲ್ಲಿನ ದಾಖಲಾಧಾರಿತವಾಗಿ ಆಂಗ್ಲ ಭಾಷೆಯಲ್ಲೇ ಪ್ರಥಮ ಬಾರಿಗೆ ‘ರಿಕಾಲಿಂಗ್ ಅಮರ ಸುಳ್ಯ’ ಎಂಬ ಪುಸ್ತಕ ರಚನೆಗೊಂಡಿದೆ. ಅಮರ ಸುಳ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಂದಿನ ಪತ್ರಿಕಾ ಪ್ರಕಟಣೆಗಳು, ಅಂದಿನ ಪ್ರತ್ಯಕ್ಷದರ್ಶಿಗಳ ಅಭಿಪ್ರಾಯಗಳು, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಬ್ರಿಟೀಷರ ತೀರ್ಪು, ತುಳುನಾಡಿನ ದೇಶಪ್ರೇಮಿಗಳ ಬಲಿದಾನ ಅವರನ್ನು ಗಲ್ಲಿಗೇರಿಸುವಲ್ಲಿ ಬ್ರಿಟಿಷರ ಕ್ರೌರ್ಯ ಹೀಗೇ ಈ ಐತಿಹಾಸಿಕ ಘಟನೆಯ ನಂತರದಲ್ಲಿ ಬ್ರಿಟಿಷರು ಇದನ್ನು ಶಾಶ್ವತವಾಗಿ ಮರೆಮಾಚಲು ಯತ್ನಿಸಿದ ರೀತಿಗಳು ಮತ್ತು ಭವಿಷ್ಯದಲ್ಲಿ ಕಾನೂನು ರಚನೆಯ ಮೇಲೆ ಈ ಪ್ರಭಾವದ ಕುರಿತು ಇನ್ನಷ್ಟು ಅನೇಕ ಬಹಿರಂಗಪಡಿಸುವಿಕೆಗಳು ೧೮೫ ವರ್ಷಗಳ ನಂತರ ಸಾರ್ವಜನಿಕ ವಲಯಕ್ಕೆ ಈ ಪುಸ್ತಕದ ಮೂಲಕ ಬೆಳಕಿಗೆ ಬಂದಿದೆ.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ನಾಡಿನ ಹೋರಾಟದ ಕಥನದ ಐತಿಹಾಸಿಕ ದಾಖಲೆಗಳು ಮಕ್ಕಳಿಗೆ ತಿಳಿಯಬೇಕು. ನಾಡಿನ ಬಗ್ಗೆ ಕೆಚ್ಚು ಮೂಡಿಸುವ ಇಂತಹ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಇಂತಹ ಕೃತಿಗಳು ಶಾಲೆಗಳಲ್ಲಿ ಇತಿಹಾಸ ವಿಷಯದ ಪಠ್ಯಗಳಾಗಬೇಕು ಎಂದರು.
ಕೃತಿಯ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಮಾತನಾಡಿ, ‘ಈ ಕೃತಿ ನಮ್ಮದೇ ಮಣ್ಣಿನ ಚರಿತ್ರೆ. ನಮ್ಮ ಮನೆಯಲ್ಲಿದ್ದ ಬರ್ಮಿಂಗ್‌ಹ್ಯಾಂ ಕೋವಿ ಮೂಲದ ಹುಡುಕಾಟದಲ್ಲಿ ತೊಡಗಿದ ಸಿಕ್ಕ ಇತಿಹಾಸದ ದಾಖಲೆಗಳನ್ನು ನೋಡಿದಾಗ ನಮ್ಮೂರಿನಲ್ಲೇ ನಿಜಕ್ಕೂ ಇಂತಹದ್ದೊಂದು ಕ್ರಾಂತಿ ನಡೆದಿದೆಯೇ ಎಂದು ಅಚ್ಚರಿ ಆಗಿದ್ದುಂಟು. ಇದು ಇಷ್ಟು ವರ್ಷ ಜನರನ್ನು ತಲುಪಲಿಲ್ಲ ಏಕೆ ಎಂದು ಚೋದ್ಯವೂ ಆಗಿತ್ತು’ ಎಂದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲಸಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅತಿಥಿಗಳಾಗಿದ್ದರು. ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಪುಸ್ತಕದ ಬಗ್ಗೆ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕಡಬ ದಿನೇಶ್ ರೈ, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!