Monday, September 26, 2022

Latest Posts

ಏಕದಿನ ಕ್ರಿಕೆಟ್‌ನ ಮೊಟ್ಟ ಮೊದಲ ಶತಕ ದಾಖಲಾಗಿ 50 ವರ್ಷ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ಶತಕದ ಕನಸು ಹೊತ್ತೇ ಕ್ರೀಡಾಂಗಣಕ್ಕೆ ಇಳಿಯುತ್ತಾನೆ. ಆದರೆ ಈ ಕನಸು ನೆರವೇರುವುದು ಕೆಲವೇ ಆಟಗಾರರಿಗೆ ಮಾತ್ರ. ಸಚಿನ್, ಕೊಹ್ಲಿಯಂತಹ ವಿಶ್ವಶ್ರೇಷ್ಠ ಆಟಗಾರರು ಶತಕ ಬಾರಿಸುವುದರಲ್ಲೇ ದಾಖಲೆ ಬರೆದರೆ, ಎಷ್ಟೋ ಕ್ರಿಕೆಟಿಗರು ಶತಕವಿಲ್ಲದೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಅದೇನೇ ಇರಲಿ, ಇತಿಹಾಸದ ಕಡೆಗೆ ತಿರುಗಿ ನೋಡುವುದಾದರೆ ಏಕದಿನ ಕ್ರಿಕೆಟ್‌ ನಲ್ಲಿ ಮೊದಲ ಶತಕ ದಾಖಲಾಗಿ ಇದೀಗ 50 ವರ್ಷಗಳು ಪೂರ್ಣಗೊಂಡಿವೆ!.
1972 ರ ಆಗಸ್ಟ್‌ 24 ರಂದು ಏಕದಿನ ಕ್ರಿಕೆಟ್‌ ನಲ್ಲಿ ಮೊಟ್ಟ ಮೊದಲ ಶತಕ ದಾಖಲಾಗಿತ್ತು. ಪ್ರವಾಸಿ ಆಸ್ಟ್ರೇಲಿಯಾ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಇಂಗ್ಲೆಂಡಿಗೆ ಪ್ರಯಾಣಿಸಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಈ ಸರಣಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದ ಇಂಗ್ಲಿಷ್ ದಾಂಡಿಗನೊಬ್ಬ ಅಂತಾರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಶತಕವನ್ನು ದಾಖಲಿಸಿ ವಿಜೃಂಭಿಸಿದ್ದ.
ಇಂಗ್ಲೆಂಡ್ ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೆನ್ನಿಸ್ ಅಮಿಸ್ ಇಂತಹದ್ದೊಂದು ವಿಶ್ವದಾಖಲೆ ಬರೆದವರು. ಕ್ರಿಕೆಟ್‌ ಇತಿಹಾಸದಲ್ಲೇ ಇದೊಂದು ಗಮನಾರ್ಹ ಸಾಧನೆಯಾಗಿತ್ತು. ಆ ಸಂದರ್ಭದಲ್ಲಿ ಸೀಮಿತ ಓವರ್‌ಗಳ ಹೊಸ ಸ್ವರೂಪಕ್ಕೆ ಹೊಂದಿಕೊಳ್ಳಲು ಆಟಗಾರರು ಕಷ್ಟಪಡುತ್ತಿದ್ದರು. ಆಗ ಟೆಸ್ಟ್‌ ನಲ್ಲಿ ಶತಕ ಬಾರಿಸುವುದೆಂದರೆ ಅದೊಂದು ಮಹತ್ಸಾಧನೆಯಾಗಿತ್ತು. ಇನ್ನು ಹೆಚ್ಚಿನ ಕ್ರಿಕೆಟಿಗರಿಗೆ ಏಕದಿನದಲ್ಲಿ ಶತಕವನ್ನು ಗಳಿಸಬಹುದು ಎಂಬ ಪರಿಕಲ್ಪನೆಯೇ ಇರಲಿಲ್ಲ.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ 55 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿತ್ತು. ನಾಯಕ ಇಯಾನ್ ಚಾಪೆಲ್ (53), ರಾಸ್ ಎಡ್ವರ್ಡ್ಸ್ (57) ಮತ್ತು ಗ್ರೆಗ್ ಚಾಪೆಲ್ (40) ಉತ್ತಮ ಕೊಡುಗೆ ನೀಡಿದ್ದರು. ಇಂಗ್ಲೆಂಡ್ ಪರ ಮಧ್ಯಮ ವೇಗಿ ಬಾಬ್ ವೂಲ್ಮರ್ (3/33) ಮತ್ತು ಗೋಫ್ ಅರ್ನಾಲ್ಡ್ (2/38) ಪ್ರಮುಖ ವಿಕೆಟ್ ಕಬಳಿಸಿದ್ದರು.
223 ರನ್‌ಗಳನ್ನು ಬೃಹತ್‌ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, 48 ರನ್‌ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಜಿಯೋಫ್ ಬಾಯ್ಕಾಟ್‌(25 ರನ್‌)ರನ್ನು ಕಳೆದುಕೊಂಡಿತು. ಆ ಬಳಿಕ ಕ್ರೀಸ್‌ ಗೆ ಇಳಿದ ನಂತರ ಅಮಿಸ್ ಮತ್ತು ಕೀತ್ ಫ್ಲೆಚರ್ ಜೊತೆಗೆ ಸೇರಿ ಇನ್ನಿಂಗ್ಸ್‌ ಬೆಳೆಸಲಾರಂಭಿಸಿದ. ಈ ಜೊತೆಯಾಟ 125 ರನ್‌ಗಳಿಗೆ ತಲುಪಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದಾಗ, 60 ರನ್‌ಗಳಿಸಿದ್ದ ಕೀತ್‌ ರನ್ನು  ಬಾಬ್ ಮಾಸ್ಸಿ ಪೆವಿಲಿಯನ್‌ ಗೆ ಅಟ್ಟಿದ. ಆ ಬಳಿಕ ಎಚ್ಚರಿಕೆ ಮಿಶ್ರಿತ ಆಟವಾಡಿದ ಡೆನ್ನಿಸ್ ಅಮಿಸ್‌ ಏಕದಿನ ಕ್ರಿಕೆಟ್‌ ನ ಮೊಟ್ಟಮೊದಲ ಶತಕವನ್ನು ಸಿಡಿಸಿ ಸಂಭ್ರಮಿಸಿದ. ಒಟ್ಟು 134 ಎಸೆತಗಳನ್ನು ಎದುರಿಸಿದ್ದ ಅಮಿಸ್ ಒಂಬತ್ತು ಕ್ಲಾಸಿ ಬೌಂಡರಿಗಳಿದ್ದ 103 ರನ್ ಕಲೆಹಾಕಿದ್ದ.‌ ಇಂಗ್ಲೆಂಡ್ ಗೆಲುವಿಗೆ ಎಂಟು ರನ್‌ಗಳು ಬೇಕಿದ್ದಾಗ ಆತ ಗ್ರೇಮ್ ವ್ಯಾಟ್ಸನ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿ ಹೊರನಡೆದ. ಆ ವೇಳೆ ಕ್ರೀಡಾಂಗಣದಲ್ಲಿದ್ದ ಸಮಸ್ತ ಪ್ರೇಕ್ಷಕರು ಅನಿಸ್ ಆಟಕ್ಕೆ ಎದ್ದುನಿಂತು ಚಪ್ಪಾಳೆ ತಟ್ಟಿ ಆತನಿಗೆ ಗೌರವ ಸಲ್ಲಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್ 49.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ನೀಡಿದ್ದ 223 ರನ್‌ ಗಳ ಮೊತ್ತವನ್ನು ಬೆನ್ನಟ್ಟಿತ್ತು.
ಅಮಿಸ್ ತನ್ನ 18-ಪಂದ್ಯಗಳ ODI ವೃತ್ತಿಜೀವನದಲ್ಲಿ, ಅವರು ಇನ್ನೂ ಮೂರು ಶತಕಗಳನ್ನು ಸಿಡಿಸಿದ್ದರು. 18 ಪಂದ್ಯಗಳಲ್ಲಿ ಅವರು 47.72 ರ ಅತ್ಯುತ್ತಮ ಸರಾಸರಿಯಲ್ಲಿ 859 ರನ್ ಕಲೆಹಾಕಿದ್ದರು. ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 137. ಅನಿಸ್‌ ಶತಕದ ಬಳಿಕ ಏಕದಿನ ಕ್ರಿಕೆಟ್‌ ಸ್ವರೂಪವೇ ಬದಲಾಯಿತು. ಕ್ರಿಕೆಟ್‌ ಆಕ್ರಮಣಕಾರಿ ಶೈಲಿ ಹೆಚ್ಚಿತು. ಹಲವಾರು ಕ್ರಿಕೆಟಿಗರು ಶತಕದ ಮೇಲೆ ಶತಕ ಸಿಡಿಸಿ ಏಕದಿನ ಕ್ರಿಕೆಟ್‌ ನ ಖ್ಯಾತಿಯನ್ನು ಮುಗಿಲೆತ್ತರಕ್ಕೆ ಏರಿಸಿದರು.
ಭಾರತದ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಗಳ ಸರದಾರ. ಸಚಿನ್‌ ಬತ್ತಳಿಕೆಯಲ್ಲಿ ಒಟ್ಟು 49 ಶತಕಗಳಿವೆ. ಅವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (43), ರಿಕಿ ಪಾಂಟಿಂಗ್ (30), ರೋಹಿತ್ ಶರ್ಮಾ (29) ಇದ್ದಾರೆ. ಸನತ್ ಜಯಸೂರ್ಯ (28), ಹಾಶಿಮ್ ಆಮ್ಲ (27) ಮತ್ತು ಅಬ್ ಡಿವಿಲಿಯರ್ಸ್ (25) ಮತ್ತಿತರ ಖ್ಯಾತನಾಮರು ನಂತರ ಸ್ಥಾನದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!