ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ ಬಗ್ಗೆ ಸೂಕ್ತ ತನಿಖೆಗೆ ಶಾಸಕ ಅಪ್ಪಚ್ಚುರಂಜನ್ ಒತ್ತಾಯ

ಹೊಸದಿಗಂತ ವರದಿ, ಮಡಿಕೇರಿ:
ಮಡಿಕೇರಿಯ ಜಿಲ್ಲಾಧಿಕಾರಿಯವರ ಕಚೇರಿಯ ತಡೆಗೋಡೆ ನಿರ್ಮಾಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದರೊಂದಿಗೆ ಇದಕ್ಕೆ ಕಾರಣರಾದ ಇಂಜಿನಿಯರ್ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.
ಈ ಸಂಬಂಧವಾಗಿ ಲೋಕೋಪಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದ ಮುಖ್ಯ ಇಂಜಿನಿಯರ್ ಹಾಗೂ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಅವರು ಪತ್ರ ಬರೆದಿದ್ದಾರೆ.
ಮಡಿಕೇರಿಯ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ ರಸ್ತೆಗೆ ಹೊಂದಿಕೊಂಡಂತೆ 7 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದು, ಈ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ತಾನು ಖುದ್ದು ಪರಿಶೀಲಿಸಿ ಕೈಗೊಳ್ಳುವ ಕಾಮಗಾರಿಯು ಕೊಡಗು ಜಿಲ್ಲೆಗೆ ಹೊಂದಿಕೊಳ್ಳದೇ ಇರುವುದರಿಂದ ತಡೆಗೋಡೆಯನ್ನು ತಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ತಳಪಾಯ ನಿರ್ಮಿಸಿ ಮೇಲ್ಭಾಗದವರೆಗೆ ಕಾಂಕ್ರಿಟ್ ಗೋಡೆ ನಿರ್ಮಿಸುವಂತೆ ಸಲಹೆ ನೀಡಿದ್ದೆ. ಈ ಸಂದರ್ಭದಲ್ಲಿ ಈ ಕಾಮಗಾರಿಯನ್ನು ದೆಹಲಿಯಿಂದ ಬಂದಿರುವ ಇಂಜಿನಿಯರ್ ಅವರ ನಿರ್ದೇಶನದಂತೆ ನಿರ್ಮಿಸುತ್ತಿರುವುದಾಗಿ ಇಲ್ಲಿನ ಇಂಜಿನಿಯರ್ ಮತ್ತು ಗುತ್ತಿಗೆದಾರರು ತಿಳಿಸಿದ್ದು, ನನ್ನ ಸಲಹೆಯನ್ನು ಪರಿಗಣಿಸಿರುವುದಿಲ್ಲ. ಆದರೆ ನಿರ್ಮಿಸಿದ ತಡೆಗೋಡೆಯು ಇತ್ತೀಚೆಗೆ ಸುರಿದ ಮಳೆಯಿಂದ ಬೀಳುವ ಹಂತಕ್ಕೆ ತಲುಪಿದ್ದು, ಈ ಸಂಬಂಧ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡುವ ಪರಿಸ್ಥಿತಿ ಉಂಟಾಗಿತ್ತು ಎಂದು ಶಾಸಕರು ಗಮನಸೆಳೆದಿದ್ದಾರೆ.
ತಡೆಗೋಡೆಗೆ 7 ಕೋಟಿ ರೂ. ವೆಚ್ಚ ಮಾಡಿದ್ದರೂ ಸಹ ಕಾಮಗಾರಿ ಗುಣಮಟ್ಟದಿಂದ ಕೂಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ‌. ಯಾವುದೇ ಕಾಮಗಾರಿಯನ್ನು ನಿರ್ಮಿಸುವ ಮೊದಲು ಅಲ್ಲಿನ ಹವಾಗುಣಕ್ಕೆ ಹೊಂದಿಕೊಂಡಂತೆ ಕಾಮಗಾರಿ ಕೈಗೊಳ್ಳಬೇಕೇ ವಿನಹ ವೈಜ್ಞಾನಿಕವೆಂದು ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳದಂತೆ ಮಾಡದಿದ್ದಲ್ಲಿ ಯಾವುದೇ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ತಾವುಗಳು ಈ ಬಗ್ಗೆ ಖುದ್ದು ಪರಿಶೀಲಿಸಿ ಸಂಬಂಧಿಸಿದ ಕಾಮಗಾರಿಯನ್ನು ಕೈಗೊಂಡ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಲ್ಲದೆ, ಸಂಬಂಧಿಸಿದ ಇಂಜಿನಿಯರ್‌ ವಿರುದ್ಣದವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಸಕ ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!