ರಾಜೀನಾಮೆಗೆ ರಾಹುಲ್‌ ರನ್ನು ಹೊಣೆಯಾಗಿಸಿದ ಗುಲಾಂ ನಬಿ: “ಭಾರತ್‌ ಜೋಡೋ ಮೊದಲು ಕಾಂಗ್ರೆಸ್‌ ಜೋಡೋ ಮಾಡಬೇಕಿದೆ ಪಕ್ಷ”

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್‌ ಪಾಳಯಕ್ಕೀಗ ಇರುಸುಮುರುಸಿನ ಪರಿಸ್ಥಿತಿ ಎದುರಾಗಿದೆ. ಪಕ್ಷದ ಮುತ್ಸದ್ಧಿ ನಾಯಕ ಗುಲಾಂ ನಬೀ ಆಜಾದ್‌ ರಾಜೀನಾಮೆ ನೀಡಿರುವುದು ಆಘಾತವುಂಟು ಮಾಡಿದ್ದರೆ ಗುಲಾಂ ನಬೀ ಆಜಾದ್‌ ತಮ್ಮ ರಾಜೀನಾಮೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹೊಣೆಯಾಗಿಸಿರುವುದು ಪಕ್ಷಕ್ಕೆ ಮುಜುಗರವನ್ನು ತಂದಿಕ್ಕಿದೆ.

ಪಕ್ಷದ ಪ್ರಭಾವಳಿ ಹೆಚ್ಚಿಸಿಕೊಳ್ಳೋಕೆ ದೇಶದಾದ್ಯಂತ ಭಾರತ್‌ ಜೋಡೋ ಯಾತ್ರೆ ಘೋಷಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಈಗ ಭಾರತ್‌ ಜೋಡೋಗಿಂತಲೂ ಮೊದಲು ಕಾಂಗ್ರೆಸ್‌ ಜೋಡೋ ಮಾಡಬೇಕಿರುವಂತಹ ಪರಿಸ್ಥಿತಿ ಎದುರಾಗಿದೆ. ಮೊದಲು ಕಪಿಲ್‌ ಸಿಬಲ್‌ ಈಗ ಗುಲಾಂ ನಬೀ ಆಜಾದ್‌ ರಂತಹ ಮುತ್ಸದ್ಧಿ ನಾಯಕರು ಪಕ್ಷವನ್ನು ತೊರೆಯುತ್ತಿರುವುದು ಹಾಗೆಯೇ ನಾಯಕತ್ವದ ಕುರಿತು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕುತ್ತಿರುವುದು ಕಾಂಗ್ರೆಸ್‌ ಪಾಲಿಗೆ ಒಳ್ಳೆಯ ಬೆಳವಣಿಗೆಯಂತೂ ಖಂಡಿತ ಅಲ್ಲ. ಕಾಂಗ್ರೆಸ್‌ ನಾಯಕತ್ವದ ಕುರಿತು ಹೊಗೆಯಾಡುತ್ತಿರುವ ಅಸಮಾಧಾನದ ಕಿಡಿ ಕಾಂಗ್ರೆಸ್‌ ನ ಭವಿಷ್ಯವನ್ನು ಪ್ರಶ್ನಾರ್ಥಕದಲ್ಲಿಡುವಂತೆ ಮಾಡಿದೆ.

ಕಾಂಗ್ರೆಸ್‌ ಕುಸಿಯಲು ರಾಗಾ ಅಪ್ರಬುದ್ಧತೆಯೇ ಕಾರಣ:

ಪ್ರಸ್ತುತ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಗುಲಾಂ ನಬೀ ತಮ್ಮ ರಾಜೀನಾಮೆಗೆ ರಾಗಾರನ್ನು ಹೊಣೆಗಾರರನ್ನಾಗಿಸಿದ್ದಾರೆ. ತಮ್ಮ ವಿವರವಾದ 5 ಪುಟಗಳ ರಾಜೀನಾಮೆಯಲ್ಲಿ ಪುಂಖಾನುಪುಂಖವಾಗಿ ರಾಹುಲ್‌ ಗಾಂಧಿಯವರ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ. “ಕಳೆದ 8 ವರ್ಷಗಳಲ್ಲಿ ನಾಯಕತ್ವವು ಗಂಭೀರವಲ್ಲದ ವ್ಯಕ್ತಿಯನ್ನು ಪಕ್ಷದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದರಿಂದ ಇದೆಲ್ಲ ಸಂಭವಿಸಿದೆ” ಎಂದಿರುವ ಅವರು ಕಾಂಗ್ರೆಸ್‌ನ ಕ್ಷೀಣಿಸುತ್ತಿರುವ ರಾಜಕೀಯ ಪ್ರಭಾವ ಮತ್ತು ಚುನಾವಣೆಯಲ್ಲಿ ಕಳಪೆ ಪ್ರದರ್ಶನಕ್ಕೆ ರಾಹುಲ್‌ ಗಾಂಧಿಯವರ “ಅಪ್ರಬುದ್ಧತೆ” ಯೇ ಕಾರಣ ಎಂದು ಆರೋಪಿಸಿದ್ದಾರೆ.

“ಈ ಅಪ್ರಬುದ್ಧತೆಗೆ ಅತ್ಯಂತ ಎದ್ದುಕಾಣುವ ಉದಾಹರಣೆಯೆಂದರೆ, ರಾಹುಲ್ ಗಾಂಧಿಯವರು ಮಾಧ್ಯಮಗಳ ಎದುರಲ್ಲಿ ಸರ್ಕಾರಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದರು … ಈ ‘ಬಾಲಿಶ’ ನಡವಳಿಕೆಯು 2014 ರಲ್ಲಿ ಯುಪಿಎ ಸರ್ಕಾರದ ಸೋಲಿಗೆ ಗಣನೀಯ ಕೊಡುಗೆ ನೀಡಿದೆ” ಎಂದು ಆಜಾದ್ ಪತ್ರದಲ್ಲಿ ಬರೆದಿದ್ದಾರೆ.

ಇನ್ನು ಅವರು ತಮ್ಮ ಪತ್ರದಲ್ಲಿ ಕಾಂಗ್ರೆಸ್‌ ನಲ್ಲಿ ಹಿರಿಯ ನಾಯಕರಿಗಾದ ಅವಮಾನದ ಕುರಿತೂ ಉಲ್ಲೇಖಿಸಿದ್ದಾರೆ. ಆಗಸ್ಟ್ 2020 ರಲ್ಲಿ, 23 ಹಿರಿಯ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ತಕ್ಷಣದ ಮತ್ತು ಸಕ್ರಿಯ ನಾಯಕತ್ವ ಮತ್ತು ಸಾಂಸ್ಥಿಕ ಪುನಶ್ಚೇತನಕ್ಕೆ ವಿನಂತಿಸಿದರು. ಲೋಕಸಭೆ ಮತ್ತು ರಾಜ್ಯ ಚುನಾವಣೆಗಳಲ್ಲಿ ಪದೇ ಪದೇ ಸೋಲುತ್ತಿರುವ ಹಿನ್ನೆಲೆಯಲ್ಲಿ ಪಕ್ಷದೊಳಗೆ ಕೂಲಂಕುಷ ಪರೀಕ್ಷೆ ನಡೆಸುವಂತೆ ಪತ್ರದಲ್ಲಿ ಕೋರಲಾಗಿತ್ತು.

“ಪಕ್ಷದ ಮೇಲಿನ ಕಾಳಜಿಯಿಂದ ಆ ಪತ್ರ ಬರೆದ 23 ಹಿರಿಯ ನಾಯಕರು ಮಾಡಿದ ಏಕೈಕ ಅಪರಾಧವೆಂದರೆ ಅವರು ಪಕ್ಷದಲ್ಲಿನ ದೌರ್ಬಲ್ಯಕ್ಕೆ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ತೋರಿಸಿದ್ದಾರೆ. ದುರದೃಷ್ಟವಶಾತ್, ಸಭೆಯಲ್ಲಿ ಆ ಅಭಿಪ್ರಾಯಗಳನ್ನು ರಚನಾತ್ಮಕ ಮತ್ತು ಸಹಕಾರಿ ರೀತಿಯಲ್ಲಿ ತೆಗೆದುಕೊಳ್ಳುವ ಬದಲು ನಮ್ಮನ್ನು , ಅವಮಾನಿಸಲಾಗಿದೆ ಮತ್ತು ನಿಂದಿಸಲಾಗಿದೆ” ಎಂದು ಗುಲಾಂ ನಬಿ ಉಲ್ಲೇಖಿಸಿದ್ದಾರೆ.

‘ಭಾರತ್ ಜೋಡೋ ಯಾತ್ರೆ’ ಆರಂಭಿಸುವ ಮುನ್ನ ಪಕ್ಷದ ನಾಯಕತ್ವವು ‘ಕಾಂಗ್ರೆಸ್ ಜೋಡೋ ಯಾತ್ರೆ’ ಕೈಗೊಳ್ಳಬೇಕಿತ್ತು ಎಂದು ಹಿರಿಯ ನಾಯಕ ಗುಲಾಂ ನಬೀ ಆಜಾದ್‌ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!