Tuesday, November 18, 2025

ರಣಜಿಯಲ್ಲಿ ಕನ್ನಡಿಗನ ಹ್ಯಾಟ್ರಿಕ್ ದ್ವಿಶತಕ: ಫಸ್ಟ್–ಕ್ಲಾಸ್ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಎಡಗೈ ದಾಂಡಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕದ ಯುವ ಎಡಗೈ ಬ್ಯಾಟರ್ ಸ್ಮರಣ್ ರವಿಚಂದ್ರನ್ ತಮ್ಮ ಅದ್ಭುತ ಆಟದಿಂದ ಗಮನ ಸೆಳೆಯುತ್ತಿರುವುದು ಮುಂದುವರಿದಿದೆ. ಜನವರಿಯಲ್ಲಿ ಪಂಜಾಬ್ ವಿರುದ್ಧ 203 ರನ್ ಬಾರಿಸಿ ಚರ್ಚೆಗೆ ಬಂದಿದ್ದ ಸ್ಮರಣ್, ಇದೀಗ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಚಂಡೀಗಢ್ ವಿರುದ್ಧ ನಡೆಯುತ್ತಿರುವ ಪ್ರಸ್ತುತ ರಣಜಿ ಗ್ರೂಪ್–ಬಿ ಪಂದ್ಯದಲ್ಲಿ ಅವರು ಬ್ಯಾಕ್–ಟು–ಬ್ಯಾಕ್ ದ್ವಿಶತಕ ಸಿಡಿಸುವ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.

ಹುಬ್ಬಳಿಯ ಕೆಎಸ್‌ಸಿಎ ಮೈದಾನದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ ಕರ್ನಾಟಕ ಪರ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮರಣ್, ಶಾಂತ–ಸ್ಥಿರ ಮತ್ತು ಆಕ್ರಮಣಕಾರಿ ಶೈಲಿಯ ಸಂಯೋಜನೆಯೊಂದಿಗೆ ಬ್ಯಾಟಿಂಗ್ ಪ್ರದರ್ಶಿಸಿದರು. 362 ಎಸೆತಗಳನ್ನು ಎದುರಿಸಿ 16 ಬೌಂಡರಿ ಮತ್ತು 2 ಸಿಕ್ಸ್‌ಗಳ ಸಹಾಯದಿಂದ ಅಜೇಯ 227 ರನ್ ಬಾರಿಸಿ ತಂಡದ ಮೊತ್ತವನ್ನು ಬೆಳಗಿಸಿದರು. ಅವರ ದ್ವಿಶತಕದ ನೆರವಿನಿಂದ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 547 ರನ್‌ಗಳನ್ನು ದಾಖಲಿಸಿ ಡಿಕ್ಲೇರ್ ಘೋಷಿಸಿತು.

ಇದು ಸ್ಮರಣ್ ಅವರ ಈ ವರ್ಷದ ಮೂರನೇ ದ್ವಿಶತಕ. ಇದೇ ಮೊದಲು ಕೇರಳ ವಿರುದ್ಧ ಅಜೇಯ 220 ರನ್ ಮತ್ತು ಅದರ ಮುನ್ನ ಪಂಜಾಬ್ ವಿರುದ್ಧ 203 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದ್ದರು. ಇದೀಗ ಮೂರನೇ ದ್ವಿಶತಕದೊಂದಿಗೆ ಅವರು ಫಸ್ಟ್–ಕ್ಲಾಸ್ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ್ದಾರೆ.

22 ವರ್ಷದ ಸ್ಮರಣ್, ಕರ್ನಾಟಕ ಪರ ಇದುವರೆಗೆ ಆಡಿದ 13 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ದ್ವಿಶತಕ, 1 ಶತಕ ಮತ್ತು 3 ಅರ್ಧಶತಕಗಳ ಮೂಲಕ ತನ್ನ ಕೆರಿಯರ್‌ಗೆ ಸ್ಮರಣೀಯ ಆರಂಭ ನೀಡಿದ್ದಾರೆ. ಫಸ್ಟ್–ಕ್ಲಾಸ್ ಕ್ರಿಕೆಟ್ ಮಾತ್ರವಲ್ಲದೆ ಟಿ20 ಫಾರ್ಮ್ಯಾಟ್‌ನಲ್ಲೂ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. 6 ಪಂದ್ಯಗಳಲ್ಲಿ 170 ರನ್ ಗಳಿಸಿರುವ ಸ್ಮರಣ್, ಇದೇ ಕಾರಣಕ್ಕೆ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡದವರಿಂದ ಮುಂದಿನ ಸೀಸನ್‌ಗೂ ರಿಟೈನ್‌ ಆಗಿದ್ದಾರೆ.

error: Content is protected !!