ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಲೋಕಾಪರ್ಣೆಣೆಗೊಳಿಸುವ ಮುನ್ನ ಪ್ರಧಾನಿ ಮೋದಿಯವರು ನೌಕಾಸೇನೆಯ ಹೊಸ ಧ್ವಜ ʼನಿಶಾನ್ʼ ಅನ್ನು ಅನಾವರಣಗೊಳಿಸಿದ್ದಾರೆ. ಇನ್ನು ಮುಂದೆ ಹೊಸ ಲಾಂಛನವನ್ನು ಹೊತ್ತ ಬಾವುಟಗಳು ನೌಕಾಸೇನೆಯ ಎಲ್ಲಾ ನೌಕೆಗಳ ಮೇಲೆ ರಾರಾಜಿಸಲಿದೆ.
ಬ್ರಿಟೀಷರ ಕಾಲದಲ್ಲಿ ರಚಿಸಲ್ಪಟ್ಟಿದ್ದ ಲಾಂಛನವು ಇಲ್ಲಿಯವರೆಗೂ ನೌಕಾಸೇನೆಯಲ್ಲಿ ಬಳಕೆಯಲ್ಲಿತ್ತು. ಅದರಲ್ಲಿ ಸೇಂಟ್ ಜಾರ್ಜ್ ಕ್ರಾಸ್ ಅನ್ನು ಚಿತ್ರಿಸಲಾಗಿತ್ತು. ಆದರೆ ಇಗ ನೂತನವಾಗಿ ಅನಾವರಣಗೊಂಡಿರುವ ಈ ಲಾಂಛನದಲ್ಲಿ ಭಾರತದ ಶ್ರೇಷ್ಠ ರಾಜರುಗಳಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯನ್ನು ಒಳಗೊಂಡಿದೆ.
“ಗುಲಾಮಗಿರಿಯ ಸಂಕೇತವನ್ನು ಹೊಂದಿರುವ ಭಾರತೀಯ ನೌಕಾ ಧ್ವಜಗಳನ್ನು ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಿತವಾದ ಹೊಸದಕ್ಕೆ ಬದಲಾಯಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವು ವಸಾಹತು ಶಾಹಿಯ ಭೂತಕಾಲವನ್ನು ಮರೆತಿದೆ ಎಂದು ಉಲ್ಲೇಖಿಸಿದ ಅವರು ಐಎನ್ಎಸ್ ವಿಕ್ರಾಂತ್ ಅನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಅರ್ಪಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿಯವರು “ಇಲ್ಲಿಯವರೆಗೆ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಗುಲಾಮಗಿರಿಯ ಗುರುತು ಉಳಿದಿತ್ತು. ಆದರೆ ಇಂದಿನಿಂದ ಛತ್ರಪತಿ ಶಿವಾಜಿಯಿಂದ ಪ್ರೇರಿತರಾಗಿ ಹೊಸ ನೌಕಾಪಡೆಯ ಧ್ವಜವು ಸಮುದ್ರದಲ್ಲಿ ಮತ್ತು ಆಕಾಶದಲ್ಲಿ ಹಾರಲಿದೆ” ಎಂದು ಅವರು ಹೇಳಿದ್ದಾರೆ.
ಹೊಸ ಲಾಂಛನದಲ್ಲೇನಿದೆ ?
ಹೊಸ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಮೇಲಿನ ಎಡ ಭಾಗದಲ್ಲಿ (ಕ್ಯಾಂಟನ್) ರಾಷ್ಟ್ರೀಯ ಧ್ವಜವನ್ನು (ತ್ರಿವರ್ಣ) ಒಳಗೊಂಡಿರುತ್ತವೆ, ಇದು ಭಾರತದ ಕಡಲ ಬಲದ ರಾಷ್ಟ್ರೀಯ ಮನೋಭಾವವನ್ನು ಸಂಕೇತಿಸುತ್ತದೆ.
ಹಾರುವ ಭಾಗದಲ್ಲಿನ ಕೆಳಗಿನ ಬಲ ಮೂಲೆಯಲ್ಲಿ, ಭಾರತೀಯ ನೌಕಾಪಡೆಯ ಹೊಸ ಲಾಂಛನವು ಸೇಂಟ್ ಜಾರ್ಜ್ ಕ್ರಾಸ್ ನ ಬದಲಾಗಿ ದೇವನಾಗರಿ ಲಿಪಿಯಲ್ಲಿ ‘ಸತ್ಯಮೇವ್ ಜಯತೇ’ ಎಂಬ ರಾಷ್ಟ್ರೀಯ ಧ್ಯೇಯವಾಕ್ಯದೊಂದಿಗೆ ಭಾರತೀಯ ರಾಷ್ಟ್ರೀಯ ಲಾಂಛನವನ್ನು ಒಳಗೊಂಡಿದೆ. ನೀಲಿ ಬಣ್ಣದ ಅಷ್ಟಭುಜಾಕೃತಿಯ ಒಳಗೆ ಮಧ್ಯದಲ್ಲಿ ಆಂಕರ್ (ಲಂಗರು) ಹಾಗೂ “ಶಂ ನೋ ವರುಣಃ” ಎಂಬ ನೌಕಾಸೇನೆಯ ಧ್ಯೇಯ ವಾಕ್ಯವನ್ನು ಕೆತ್ತಲಾಗಿದೆ.