ಟೀಂ ಇಂಡಿಯಾ ಕ್ಯಾಪ್ಟನ್ಸಿ ಸದ್ಯದಲ್ಲೇ ರೋಹಿತ್‌ ಕೈತಪ್ಪಲಿದೆ.. ಪಾಕ್‌ ಆಟಗಾರ ಹಫೀಜ್‌ ಹೀಗಂದಿದ್ಯಾಕೆ?

ಹೊಸದಿಗಂತ ಡಜಿಟಲ್‌ ಡೆಸ್ಕ್
ಪಾಕಿಸ್ತಾನದ ಮಾಜಿ ನಾಯಕ ಮತ್ತು ಪಾಕ್‌ ಕಂಡ ಅತ್ಯುತ್ತಮ ಬ್ಯಾಟ್ಸ್‌ ಮನ್‌ ಗಳಲ್ಲಿ ಒಬ್ಬರಾದ ಮೊಹಮ್ಮದ್ ಹಫೀಜ್ ಭಾರತದ ನಾಯಕ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಪಿಟಿವಿಯಲ್ಲಿ ವಿಶ್ಲೇಷಕರಾಗಿ  ಕಾಣಿಸಿಕೊಂಡಿದ್ದ ಮಹಮದ್‌ ಹಫೀಜ್ ರೋಹಿತ್‌ ಕ್ಯಾಪ್ಟನ್ಸಿಯ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
“ರೋಹಿತ್‌ ಆಟದ ಅಭಿವ್ಯಕ್ತಿಯನ್ನು ಗಮನಿಸಿ. ತಂಡವು 40 ರನ್‌ಗಳ ಜಯ ಸಾಧಿಸಿದ್ದರೂ ರೋಹಿತ್‌ ಸಂತೋಷವಾಗಿದ್ದಂತೆ ಕಾಣಲಿಲ್ಲ. ಟಾಸ್ ಗೆ ಬಂದಾಗಲೂ ಅವರ ದೇಹ ಭಾಷೆ ದುರ್ಬಲವಾಗಿತ್ತು. ರೋಹಿತ್ ಹೆದರುತ್ತಾನೆ ಮತ್ತು ಗೊಂದಲಕ್ಕೊಳಗಾಗಿದ್ದಾನೆ ಎಂದು ನಾನು ಭಾವಿಸಿದೆ. ಇದು ನನಗೆ ತಿಳಿದಿರುವ ರೋಹಿತ್ ಶರ್ಮಾ ಅಲ್ಲ. ರೋಹಿತ್ ಶರ್ಮಾ ಅವರು ಹಲವಾರು ನಾಕ್‌ಗಳನ್ನು ಬ್ಲೈಂಡರ್ ಆಗಿ ಆಡಿದ್ದಾರೆ. ಈಗ ಅವರ ನೈಜ ಸಾಮರ್ಥ್ಯ ಹೊರಬರುತ್ತಿಲ್ಲ ”ಎಂದು 41 ವರ್ಷದ ಹಫೀಜ್‌ ಅಭಿಪ್ರಾಯಪಟ್ಟಿದ್ದಾರೆ.
ಭಾರತ ನಾಯಕ ರೋಹಿತ್‌ ಶರ್ಮಾ ತನ್ನ ಆಟವನ್ನು ತಾನು ಆನಂದಿಸುತ್ತಿಲ್ಲವಾದ್ದರಿಂದ ಇನ್ನು ಮುಂದೆ ದೀರ್ಘಕಾಲದವರೆಗೆ ನಾಯಕನಾಗಿ ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
“ನಾಯಕತ್ವವು ರೋಹಿತ್ ಗೆ ಹೊರೆಯಾಗಿದೆ ಮತ್ತು ಇದರಿಂದಾಗಿ ಆತನ ಆಟ ಕ್ಷೀಣಿಸಿದೆ ಎಂದು ನಾನು ಭಾವಿಸುತ್ತೇನೆ. ಅವರ ಐಪಿಎಲ್ ಕೆಟ್ಟದಾಗಿತ್ತು. ಅಂದಿನಿಂದ ಅವರ ಅಂತರಾಷ್ಟ್ರೀಯ ಕ್ರಿಕೆಟ್‌ ಮರಳುವಿಕೆಯೂ ಅಷ್ಟು ಉತ್ತಮವಾಗಿಲ್ಲ. ರೋಹಿತ್ ‘ನಾವು ಧನಾತ್ಮಕ ಕ್ರಿಕೆಟ್ ಆಡುತ್ತೇವೆ’ ಎಂಬ ವಿಚಾರವೂ ಸೇರಿದಂತೆ ಬಹಳಷ್ಟು ವಿಷಯಗಳನ್ನು ಮಾತನಾಡುತ್ತಾರೆ. ಆದರೆ ಅದು ಅವರ ಸ್ವಂತ ದೇಹ ಭಾಷೆಯಲ್ಲಿ ಪ್ರತಿಫಲಿಸುವುದಿಲ್ಲ, ”ಎಂದು ಪಾಕ್ ಕ್ರಿಕೆಟಿಗ ಹೇಳಿದ್ದಾರೆ.
“ಮಾತನಾಡುವುದು ಸುಲಭ ಆದರೆ ಅದನ್ನು ಮಾಡುವುದು ಕಷ್ಟ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂದುವರೆಯುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಆತ ಯಾವಾಗಲೂ ಆಟವನ್ನು ಆನಂದಿಸುವುದನ್ನು ನೋಡಿದ್ದೇನೆ. ಆದರೆ ಇದೀಗ ಅವರು ಅದನ್ನು ವ್ಯಕ್ತಪಡಿಸುತ್ತಿಲ್ಲ. ಅವನು ಎಲ್ಲಿಯೋ ಕಳೆದುಹೋದಂತೆ ತೋರುತ್ತಾನೆ ಮತ್ತು ಅವನ ಮೇಲೆ ಅತಿಯಾದ ಒತ್ತಡವಿದೆ. ನಾನು ಅವನ ಬಗ್ಗೆ ವಿಷಾದಿಸುತ್ತೇನೆ” ಎಂದು ಮೊಹಮದ್‌ ಹಫೀಜ್‌ ಪಾಕ್‌ ಮಾಧ್ಯಮಕ್ಕೆ ವಿಶ್ಲೇಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!