ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವಿಚಕ್ರ ವಾಹನ ಶೋರೂಂನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ವೃದ್ಧೆ (80) ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 300 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ. ಮೇದಿನಿ ನಗರದಲ್ಲಿ ಮಧ್ಯರಾತ್ರಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿಯಿಂದ ಇಂದು ಬೆಳಗ್ಗೆ 8.30ರ ವರೆಗೆ ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸುಮಾರು ಐದು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ನಂದಿಸಲಾಯಿತು.
ಶೋರೂಂ ಜೊತೆಗೆ ಗೋಡೌನ್ ಮತ್ತು ಸರ್ವೀಸ್ ಸೆಂಟರ್ ಇದೆ. ಅದರ ಪಕ್ಕದಲ್ಲೇ ಅವರ ಮನೆಯೂ ಇದೆ ಎಂದು ಶೋರೂಂ ಮಾಲೀಕರು ಹೇಳಿದ್ದಾರೆ. ಆ ಘಟನೆಯಲ್ಲಿ ಮೃತಪಟ್ಟ ವೃದ್ಧೆ ಶೋರೂಂ ಮಾಲೀಕರ ತಾಯಿ ಎನ್ನಲಾಗಿದೆ. ಬೆಂಕಿಯಿಂದ ಬಂದ ಹೊಗೆಯಿಂದಾಗಿ ಉಸಿರುಗಟ್ಟಿ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.