ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ಮಾರೆಡುಮಿಲ್ಲಿಯಲ್ಲಿ ಮೋಸ್ಟ್ ವಾಂಟೆಂಡ್ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಸೇರಿ ಆರು ಮಂದಿ ಆರು ಮಾವೋವಾದಿಗಳನ್ನು ಗುಂಡಿಕ್ಕಿ ಕೊಂದ ಒಂದು ದಿನದ ನಂತರ, ಬುಧವಾರ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಮತ್ತೊಂದು ಗುಂಡಿನ ಚಕಮಕಿಯಲ್ಲಿ ಇನ್ನೂ ಏಳು ಮಂದಿ ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಪ್ತಚರ ಇಲಾಖೆಯ ಎಡಿಜಿಪಿ ಮಹೇಶ್ ಚಂದ್ರ ಲಡ್ಡಾ, ಇಂದು ಸಾವಿಗೀಡಾದವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಹೇಳಿದರು.
ಮಂಗಳವಾರದ ಕಾರ್ಯಾಚರಣೆಯ ಮುಂದುವರಿಕೆಯಾಗಿ, ಇಂದು ಏಳು ಮಾವೋವಾದಿಗಳು ಸಾವಿಗೀಡಾಗಿದ್ದಾರೆ. ಇಂದಿನ ಕಾರ್ಯಾಚರಣೆ ಮಂಗಳವಾರ ಆರಂಭವಾಗಿದ್ದ ಗುಂಡಿನ ಚಕಮಕಿ (ಇಒಎಫ್) ಸ್ಥಳದಿಂದ ಸುಮಾರು 7 ಕಿಮೀ ದೂರದಲ್ಲಿ ನಡೆದಿದೆ’ ಎಂದು ಹೇಳಿದರು.
ಹಿರಿಯ ಅಧಿಕಾರಿ ಪ್ರಕಾರ, ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಾರೆಡುಮಿಲ್ಲಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ ಏಳು ಮಾವೋವಾದಿಗಳು ಬಲಿಯಾಗಿದ್ದಾರೆ. ಹತ್ಯೆಗೀಡಾದ ಮಾವೋವಾದಿಗಳ ಪೈಕಿ ಒಬ್ಬಾತನನ್ನು ಮೇತುರಿ ಜೋಖಾ ರಾವ್ ಅಲಿಯಾಸ್ ಟೆಕ್ ಶಂಕರ್ ಎಂದು ಗುರುತಿಸಲಾಗಿದೆ ಎಂದು ಲಡ್ಡಾ ಹೇಳಿದ್ದಾರೆ.

