ಬೆಂಗಳೂರು ಬಿಟ್ಟು ಹೋಗ್ತೇವೆ ಅಂದ ಐಟಿ ಕಂಪನಿಗಳಿಂದಲೇ ಆಗಿದೆ ಅತಿಕ್ರಮಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ಅಬ್ಬರಿಸಿದ್ದ ಮಹಾ ಮಳೆಯಿಂದಾಗಿ ನಗರ ಜಲಾವೃತವಾಗಿತ್ತು. ನಗರದ ಪ್ರತಿಷ್ಠಿತ ಐಟಿ ಕಂಪನಿಗಳ ಕಚೇರಿಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇದರಿಂದ ಕೋಪತಾಪ ಪ್ರದರ್ಶಿಸಿದ್ದ ಐಟಿ ಕಂಪನಿಗಳು, ಮಳೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಬೆಂಗಳೂರನ್ನು ತೊರೆಯುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಪತ್ರ ಬರೆದಿದ್ದವು. ಸಾಲದೆಂಬಂತೆ  ಉದ್ಯಮಿಯೊಬ್ಬರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸೋಷಿಯಲ್ ಮೀಡಿಯಾದಲ್ಲೂ ಟ್ಯಾಗ್ ಮಾಡಿ, ಬೆಂಗಳೂರು ಉಳಿಸಿ ಎಂದು ಮನವಿ ಮಾಡಿದ್ದರು. ನಗರದಲ್ಲಿ ಈಗ ಮಳೆ ತಗ್ಗಿದೆ. ಪ್ರವಾಹ ಸೃಷ್ಟಿಸಿದ ಒತ್ತುವರಿಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಅಚ್ಚರಿಯೆಂದರೆ, ಬೆಂಗಳೂರಿನಲ್ಲಿ ಪ್ರವಾಹದ ಬಗ್ಗೆ ಬೊಬ್ಬಿಟ್ಟಿದ್ದ ಹಲವು ಐಟಿ ಕಂಪನಿಗಳೇ ರಾಜಕಾಲುವೆಯನ್ನು ಅತಿಕ್ರಮಣ ಮಾಡಿಕೊಂಡು ಪ್ರವಾಹ ಸ್ಥಿತಿ ನಿರ್ಮಾಣವಾಗಲು ನೇರ ಕಾರಣವಾಗಿರುವ ವಿಚಾರ ಬಯಲಾಗಿದೆ.

ಬಾಗ್ಮನೆ ಟೆಕ್ ಪಾರ್ಕ್ ಮತ್ತು ಪೂರ್ವ ಪ್ಯಾರಡೈಸ್-  ಮಹದೇವಪುರದಲ್ಲಿ, ಆರ್‌ಬಿಡಿ ಸಂಸ್ಥೆ  3 ಸ್ಥಳಗಳಲ್ಲಿ, ದೊಡ್ಡಕನ್ನೆಲ್ಲಿಯಲ್ಲಿ ವಿಪ್ರೋ, ಬೆಳ್ಳಂದೂರಿನಲ್ಲಿ ಇಕೋ-ಸ್ಪೇಸ್, ​​ಗೋಪಾಲನ್ ಹಲವು ಸ್ಥಳಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬಯಲಾಗಿದೆ. ರಾಜಕೀಯ ಪ್ರಭಾವಿ ವ್ಯಕ್ತಿಗಳ ಒಡೆತನದ, ಪ್ರಭಾವಿಗಳ ಹಿಡಿತದಲ್ಲಿರುವ ಹಲವಾರು ಐಟಿ ಕಂಪನಿಗಳು ಈ ಲೀಸ್ಟ್‌ ನಲ್ಲಿವೆ.

ಮಳೆನೀರು ಚರಂಡಿಗಳು ಮತ್ತು ನೈಸರ್ಗಿಕ ಜಲಮಾರ್ಗಗಳನ್ನು ಅತಿಕ್ರಮಿಸಿಕೊಂಡರೆ ಮಳೆನೀರು ಹೋಗುವುದೆಲ್ಲಿಗೆ? ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ, ಲೇಔಟ್, ವಸತಿ ಸಮುಚ್ಚಯಗಳನ್ನು ನಿರ್ಮಿಸಿದ ಕಾರಣ, ಮಳೆ ನೀರು ಸರಾಗವಾಗಿ ಹರಿಯದೇ ಸಮಸ್ಯೆಗಳು ಏರ್ಪಟ್ಟಿವೆ. ಈ ಎಲ್ಲ ವಿಷಯಗಳ ಅರಿವಿದ್ದೂ ಉದ್ದೇಶಪೂರ್ವಕವಾಗಿ ಇಂತಹ ವಿಷಯಗಳನ್ನು ಮರೆಮಾಚಿ ಐಟಿ ಕಂಪನಿಗಳು ತಮಗೆ ಆಶ್ರಯ ನೀಡಿದ ನಗರವನ್ನೇ ಕಷ್ಟದ ಸನ್ನಿವೇಶದಲ್ಲಿ ಮುಜುಗರಕ್ಕೀಡು ಮಾಡಲು ಯತ್ನಿಸಿದ್ದಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ.
ʼಮಳೆ ಪ್ರವಾಹಕ್ಕೆ ತುತ್ತಾಗಿರುವ ಬೆಂಗಳೂರಿನಲ್ಲಿ ಈಗಾಗಲೇ ಬಿಬಿಎಂಪಿ ರಾಜಕಾಲುವೆ ತೆರವು ಕಾರ್ಯಾಚರಣೆ ಆರಂಭಿಸಿದ್ದು, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಮುಲಾಜಿಲ್ಲದೇ ಒತ್ತುವರಿಯನ್ನು ತೆರವುಗೊಳಿಸಲಾಗುತ್ತದೆʼ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಈ ಹಿಂದಿನ ಸರ್ಕಾರವೂ ಮಳೆಯಿಂದ ನಗರದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಒತ್ತುವರಿ ತೆರವುಗೊಳಿಸುವುದಾಗಿ ಹೇಳಿತ್ತು. ಆದರೆ ಕಾರ್ಯಾಚರಣೆ ಕೆಲವೇ ಒತ್ತುವರಿಗಳ ತೆರವಿಗಷ್ಟೇ ಸೀಮಿತವಾಗಿತ್ತು. ದೊಡ್ಡ ಸಂಸ್ಥೆಗಳು ಮಾಡಿಕೊಂಡಿದ್ದ ಒತ್ತುವರಿ ಸರ್ಕಾರದ ಕಣ್ಣಿನಿಂದ ಮರೆಯಾಗಿತ್ತು. ಈ ಬಾರಿ ಪೂರ್ಣಪ್ರಮಾಣದಲ್ಲಿ ಒತ್ತುವರಿ ತೆರವುಗೊಳಿಸುವುದಾಗಿ ಸಿಎಂ ಬೊಮ್ಮಾಯಿ ಗಟ್ಟಿಧ್ವನಿಯಲ್ಲಿ ಹೇಳಿದ್ದು,  ಕಾರ್ಯಾಚರಣೆ ಎಷ್ಟರ ಮಟ್ಟಿಗೆ ಸಾಫಲ್ಯ ಕಾಣಲಿದೆ, ಬೆಂಗಳೂರಿಗೆ ಅಂಟಿಕೊಳ್ಳುತ್ತಿರುವ ಕಪ್ಪುಚುಕ್ಕೆ ಇನ್ನಾದರೂ ದೂರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!